ಕಣಿವೆ, ಮಾ. ೧೮ : ಹಾರಂಗಿ ಹಿನ್ನೀರು ಪ್ರದೇಶದ ನಾಕೂರು ಬಳಿಯಿರುವ ಪ್ರಕೃತ್ ಎಂಬ ಹೋಮ್ ಸ್ಟೇ ಬಳಿಯ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಮೈಸೂರಿನ ಟಿವಿಎಸ್ ಬೈಕ್ ಶೋರೂಂ ವತಿಯಿಂದ ಮಾ ೧೯ ಹಾಗೂ ೨೦ ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಬೈಕ್ ರೇಸಿಂಗ್ ಮೋಜಿನಾಟಕ್ಕೆ ನೀರಾವರಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಡೆಯೊಡ್ಡಿ ಹೋಮ್ ಸ್ಟೇ ವಿರುದ್ಧ ದೂರು ದಾಖಲಿಸಿದ ಘಟನೆ ಗುರುವಾರ ನಡೆದಿದೆ.

ಹಾರಂಗಿ ಹಿನ್ನೀರು ಪ್ರದೇಶದ ಉದ್ದಕ್ಕೂ ಹೋಮ್ ಸ್ಟೇಗಳು ಹಾಗೂ ವಿವಿಧ ರೆಸಾರ್ಟ್ಗಳಿದ್ದು ತಮ್ಮಲ್ಲಿಗೆ ಬರುವ ಪ್ರವಾಸಿಗರಿಗೆ ಹಲವರು ನಿಯಮ ಬಾಹಿರವಾಗಿ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರಕ್ಕೆ ಮಾರಕ ವಾಗುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ದೂರುಗಳು ಕೇಳಿ ಬಂದ ಬೆನ್ನಲ್ಲೇ ಅಲ್ಲಿನ ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದೆನ್ನಲಾದ ಪ್ರಕೃತ್ ಹೋಮ್ ಸ್ಟೇ ವತಿಯಿಂದ ಆಯೋಜಿಸಿದ್ದ ಬೈಕ್ ರೇಸಿಂಗ್ ವಿರುದ್ಧ ಕ್ರಮ ಜರುಗಿಸಲಾಗಿದೆ.

ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಮಹೇಂದ್ರ ಕುಮಾರ್ ಅವರಿಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ, ಅವರು ಹಾರಂಗಿ ಜಲಾಶಯದ ಸುರಕ್ಷತಾ ಹೊಣೆ ಹೊತ್ತ ಪೊಲೀಸ್ ಅಧಿಕಾರಿ ಕೆ.ಎಸ್.ಚಂದ್ರಶೇಖರ್ ಹಾಗೂ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬೈಕ್ ರೇಸಿಂಗ್ ಸಿದ್ಧತೆಗೆ ಅಳವಡಿಸುತ್ತಿದ್ದ ಬ್ಯಾರಿಕೇಡ್‌ಗಳು, ಹಿನ್ನೀರಿನ ಬುಡದಲ್ಲಿ ಅಳವಡಿಸಿದ್ದ ಟೆಂಟ್‌ಗಳನ್ನು ತೆರವು ಗೊಳಿಸಿದರಲ್ಲದೇ ಹೋಮ್ ಸ್ಟೇ ವ್ಯವಸ್ಥಾಪಕ ಮನು ಎಂಬವರ ಮೇಲೆ ದೂರು ದಾಖಲಿಸಿಕೊಂಡರು.

ಹಾರAಗಿ ಹಿನ್ನೀರು ಪ್ರದೇಶವನ್ನು ಮೋಜು ಮಸ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಲ್ಲಿನ ಪರಿಸರಕ್ಕೆ ಮಾರಕವಾದ ಚಟುವಟಿಕೆ ಗಳು ಜರುಗುತ್ತಿರುವ ಬಗ್ಗೆ ಪೊಲೀಸ್ ಹಾಗೂ ನೀರಾವರಿ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದರು.

ಈ ಬಗ್ಗೆ ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ ಯೊಂದಿಗೆ ಮಾತನಾಡಿದ ಹಾರಂಗಿ ಜಲಾಶಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಹಾರಂಗಿ ಜಲಾಶಯದ ಇಡೀ ಪ್ರದೇಶ ಒಂದು ಸುರಕ್ಷತಾ ಪ್ರದೇಶವಾಗಿದೆ. ಈ ಪ್ರದೇಶದೊಳಗೆ ಅತಿಕ್ರಮ ಪ್ರವೇಶಕ್ಕೆ ಅವಕಾಶವಿಲ್ಲ. ಆದಾಗ್ಯೂ ಕೆಲವರು ವಾಹನಗಳಲ್ಲಿ ಬಂದು ಹಿನ್ನೀರು ಪ್ರದೇಶಕ್ಕೆ ತೆರಳಿ ಅಪಾಯಕಾರಿ ಸ್ಥಳಗಳಲ್ಲಿ ನೀರಿಗೆ ಇಳಿಯುವುದು, ಜಲ ಕ್ರೀಡೆಯಂತಹ ನಿಯಮಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದರು. ಈ ಬಗ್ಗೆ ಸ್ಥಳೀಯರು ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಯಾವುದೇ ನಿಯಮ ಬಾಹಿರ ಚಟುವಟಿಕೆಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದರು.

ಹಾರಂಗಿ ಜಲಾಶಯದ ಭದ್ರತಾ ಅಧಿಕಾರಿ ಕೆ.ಎಸ್.ಚಂದ್ರಶೇಖರ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್ ಪ್ರತಿಕ್ರಿಯಿಸಿ, ನೀರಾವರಿ ಅಧಿಕಾರಿಗಳು ಜಲಾಶಯದ ಪ್ರದೇಶದ ಸುತ್ತಳತೆಯನ್ನು ಗುರುತಿಸಿ ನಾಮಫಲಕ ಅಳವಡಿಸಿದಲ್ಲಿ ಪೊಲೀಸರಿಂದ ಕಾನೂನು ಕ್ರಮಗಳನ್ನು ಜರುಗಿಸಲು ಸಾಧ್ಯವಾಗುತ್ತದೆ ಎಂದರು.

ಜಲಾಶಯದ ಹಿನ್ನೀರಿನ ವಾಯು ವಿಹಾರಕ್ಕೆ ಯೋಗ್ಯರು ಬರುತ್ತಾರೆ. ಹಾಗೆಯೇ ಜಲಾಶಯದ ಸೌಂದರ್ಯಕ್ಕೆ ಮಾರಕವಾಗಿ ವರ್ತಿಸುವಂತಹ ಅಯೋಗ್ಯರು ಕೂಡ ಕೆಲವರು ಧಾವಿಸುತ್ತಾರೆ. ನೀರಾವರಿ ಅಧಿಕಾರಿಗಳು ಈ ಬಗ್ಗೆ ಏರಿಯಾ ಗುರುತಿಸಿ ಎಚ್ಚರಿಕೆ ಫಲಕ ಅಳವಡಿಸಿ ದರೆ ಪೊಲೀಸ್ ಇಲಾಖೆಯಿಂದ ಸುರಕ್ಷತೆ ಹಾಗೂ ಭದ್ರತೆಯನ್ನು ಪಾಲಿಸಲು ಅನುವಾಗುತ್ತದೆ ಎಂದರು.

ಬೈಕ್ ರೇಸಿಂಗ್ ಆಯೋಜಿಸಿದ್ದ ಪ್ರಕೃತ್ ಹೋಮ್ ಸ್ಟೇ ವ್ಯವಸ್ಥಾಪಕ ಮನು ಮಾತನಾಡಿ, ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಎಲ್ಲರೂ ಕೂಡ ಎಲ್ಲಾ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಆದ್ದರಿಂದ ನಾವು ಕೂಡ ಬೈಕ್ ರೇಸಿಂಗ್ ಹಮ್ಮಿಕೊಂಡಿದ್ದೆವು. ಆದಾಗ್ಯೂ ಅಧಿಕಾರಿಗಳ ಎಚ್ಚರಿಕೆ ನಮ್ಮ ಮೂಲಕ ಎಲ್ಲರಿಗೂ ಪಾಠವಾಗಲಿ. ಯಾರೂ ಕೂಡ ಹಿನ್ನೀರು ಪ್ರದೇಶವನ್ನು ದುರ್ಬಳಕೆ ಮಾಡುವುದನ್ನು ತಡೆಯಲಿ. ನಮ್ಮಿಂದ ಆದ ಪ್ರಮಾದಕ್ಕೆ ವಿಷಾದಿಸುತ್ತೇನೆ ಎಂದರು. ಈ ಸಂದರ್ಭ ಸುಂಟಿಕೊಪ್ಪ ಠಾಣೆಯ ಅಪರಾಧ ವಿಭಾಗದ ಉಪ ನಿರೀಕ್ಷಕ ವೆಂಕಟರಮಣ, ಹಾರಂಗಿ ಜಲಾಶಯ ವಿಭಾಗದ ಅಭಿಯಂತರರಾದ ಸತ್ಯ, ರಮೇಶ್ ಇದ್ದರು.