ಶನಿವಾರಸಂತೆ, ಮಾ. ೧೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಂದಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಬಂಡೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ. ೫೦ ಸಾವಿರ ದೇಣಿಗೆ ನೆರವು ನೀಡಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಶಿಲ್ಪಿ ಎಸ್.ಎಸ್. ವರಪ್ರಸಾದ್ ಅವರಿಗೆ ರೂ. ೫೦ ಸಾವಿರದ ಡಿ.ಡಿ.ಯನ್ನು ವಿತರಿಸಿದ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ನಿರ್ದೇಶನದಂತೆ ಐತಿಹಾಸಿಕ ಶ್ರೀಬಂಡೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ದೇಣಿಗೆ ನೀಡಲಾಗಿದೆ ಎಂದರು.
ಯೋಜನೆಯ ವಲಯ ಮೇಲ್ವಿಚಾರಕ ರಮೇಶ್, ದೇವಾಲಯ ಸಮಿತಿ ಕಾರ್ಯದರ್ಶಿ ರವೀಂದ್ರ, ನಿರ್ದೇಶಕರಾದ ಹೊನ್ನರಾಜ್, ಪಾಲಾಕ್ಷ, ಮಂಗಲ್ ಜೆ. ಚಂದ್ರಶೆಟ್ಟಿ, ಪ್ರಕಾಶ್ ಹಾಗೂ ಗುತ್ತಿಗೆದಾರ ಟಿ.ಎನ್. ಹನೀಫ್ ಹಾಜರಿದ್ದರು.