ಸುAಟಿಕೊಪ್ಪ, ಮಾ. ೧೭: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹರಾಜು ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು ಪಾರದರ್ಶಕತೆ ಕಾಪಾಡದೆ ಇರುವುದರಿಂದ ಕೆಲ ಗಂಟೆಗಳ ಕಾಲ ಪಂಚಾಯಿತಿ ಆಡಳಿತ ಮಂಡಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಬಿಡ್ಡುದಾರರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೆಶಿಸಿ ವಾತಾವರಣ ತಿಳಿಗೊಳಿಸಿದ ಪ್ರಸಂಗ ಎದುರಾಯಿತು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸಂತೆ ಮಾರುಕಟ್ಟೆ ಸುಂಕ, ಹಸಿಮೀನು, ಹಂದಿಮಾAಸ, ಕುರಿ ಮಾಂಸ ಹಾಗೂ ಕೋಳಿ ಮಾಂಸದ ಅಂಗಡಿಗಳನ್ನು ಬಹಿರಂಗ ಹರಾಜು ಹಾಗೂ ಮುಚ್ಚಿದ ಲಕೋಟೆ ಟೆಂಡರ್ ಪ್ರಕ್ರಿಯೆಯನ್ನು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಂತೆ ಮಾರುಕಟ್ಟೆ ಸುಂಕ, ಹಸಿಮೀನು, ಹಂದಿಮಾAಸ, ಕುರಿ ಮಾಂಸ ಮಳಿಗೆಗಳ ಎಲ್ಲಾ ಟೆಂಡರ್ ಪ್ರಕ್ರಿಯೆ ಸುಸೂತ್ರವಾಗಿ ನೆರವೇರಿತು. ಕೋಳಿ ಮಾಂಸದ ೧೦ ಮಳಿಗೆಗಳಲ್ಲಿ ತಲಾ ೧ ಮಳಿಗೆಗೆ ರೂ ೧,೫೦,೦೦೦ ಸರಕಾರದ ಸವಾಲು ಕನಿಷ್ಟ ದರ ನಿಗದಿಪಡಿಸಲಾಗಿತ್ತು. ಅದರಂತೆ ೧೩ ಮಂದಿ ಬಹಿರಂಗ ಹರಾಜಿಗೆ ಸಜ್ಜಾಗಿದ್ದರು. ೧೧ ಮಂದಿ ಮುಂಗಡ ಹಣಪಾವತಿಸಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ನಿಯಮಾನುಸಾರ ಮುಂಗಡ ಪಾವತಿಸಿದ ಬಿಡ್‌ದಾರನಿಗೆ ಟೆಂಡರ್ ಹರಾಜಿನಲ್ಲಿ ಮಳಿಗೆ ದೊರೆತಲ್ಲಿ ಮತ್ತೊಂದು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಆದರೆ, ಪಂಚಾಯಿತಿಯ ಆಡಳಿತ ಮಂಡಳಿ ನಿಯಮಗಳನ್ನು ಬದಿಗಿರಿಸಿ ಒಮ್ಮೆ ಹರಾಜಿನಲ್ಲಿ ಮಳಿಗೆ ಪಡೆದುಕೊಂಡವರಿಗೆ ಮತ್ತೊಂದು ಹರಾಜು ಕರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದು ಗೊಂದಲ ಏರ್ಪಡಲು ಕಾರಣವಾಯಿತು.

ಅಧಿಕಾರಿ ಹಾಗೂ ಆಡಳಿತ ಮಂಡಳಿಯವರನ್ನು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಡ್ಡುದಾರರು ಈ ಬಗ್ಗೆ ಪ್ರಶ್ನಿಸಿದರು. ಅತಿ ಹೆಚ್ಚು ಅವಕಾಶಗಳನ್ನು ನೀಡಿದ್ದರಿಂದ ಹರಾಜಿನಲ್ಲಿ ಕೆ.ಎ.ರಫೀಕ್ ೪, ಅಯಾಜ್ ೫ ಅಂಗಡಿಗಳ ಪರವಾನಗಿ ಪಡೆದುಕೊಂಡಿದ್ದರು. ಮುಚ್ಚಿದ ಲಕೋಟೆಯಲ್ಲಿ ಹರಾಜಿಗೆ ಅರ್ಜಿ ಸಲ್ಲಿಸಿದ ಟೆಂಡರ್‌ದಾರರು ಗಲಾಟೆ, ಗದ್ದಲಗೊಳಿಸುತ್ತಿದ್ದಂತೆ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ಚೆತ್ತುಕೊಂಡು ಮುಚ್ಚಿದ ಟೆಂಡರ್ ಪ್ರಕ್ರಿಯೆಯನ್ನು ತೆರೆಯಲು ಮುಂದಾದರು. ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡಿದ್ದ ಟೆಂಡರುದಾರರು ಹತ್ತು ಮಳಿಗೆಗಳ ಟೆಂಡರನ್ನು ಬಿಡುವಂತೆ ಪಟ್ಟುಹಿಡಿದು ಗಲಾಟೆ, ಕಿರುಚಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೇಚಿಗೆ ಸಿಲುಕಿದ ಆಡಳಿತ ಮಂಡಳಿಯವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರನ್ನು ಸ್ಥಳಕ್ಕೆ ಕರೆಸಿದರು. ಪೊಲೀಸ್ ಠಾಣಾಧಿಕಾರಿ ಪುನೀತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬಿಡ್‌ದಾರರನ್ನು ಸಮಾಧಾನಗೊಳಿಸಿ, ಹರಾಜಿನಲ್ಲಿ ಏನಾದರೂ ಲೋಪದೋಷಗಳು ಇದ್ದಲ್ಲಿ ಅದನ್ನು ಸರಿಪಡಿಸಲು ತಾಲೂಕು ಪಂಚಾಯಿತಿ ಇಓ ಅವರನ್ನು ಸಂಪರ್ಕಿಸುವAತೆ ಸಲಹೆ ನೀಡಿದರು.

ಆದರೆ ಏಕ ಕಾಲದಲ್ಲಿ ಬಹಿರಂಗ ಹರಾಜು, ಮುಚ್ಚಿದ ಲಕೋಟೆಯ ಟೆಂಡರ್ ಪ್ರಕ್ರಿಯೆ ನಡೆಸುವಂತಿಲ್ಲ ಎನ್ನುವ ಮಾತುಗಳು ಜನವಲಯದಲ್ಲಿ ಕೇಳಿ ಬರುತ್ತಿದೆ.