ಮಡಿಕೇರಿ, ಮಾ. ೧೭ : ಹುಲಿ ಸೆರೆ ಕಾರ್ಯಾಚರಣೆಗಾಗಿ ಒತ್ತಾಯಿಸಿ ದಕ್ಷಿಣ ಕೊಡಗಿನ ರೈತಾಪಿ ವರ್ಗದ ಹೋರಾಟದಲ್ಲಿ ಕೆಲವು ರಾಜಕಾರಣಿಗಳು ರಾಜಕೀಯ ಬೆರೆಸುತ್ತಿರುವುದು ಖಂಡನೀಯವೆAದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಕ್ಷಿಣ ಕೊಡಗು ಮಾತ್ರವಲ್ಲದೆ ಉತ್ತರ ಕೊಡಗಿನಲ್ಲಿ ಕೂಡ ಹುಲಿ ಹಾಗೂ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ರೈತಾಪಿ ವರ್ಗ ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಹೋರಾಟ ನ್ಯಾಯೋಚಿತವಾಗಿದೆ. ಆದರೆ ಇದನ್ನೇ ನೆಪಮಾಡಿಕೊಂಡು ವಿರೋಧ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲವೆಂದು ಟೀಕಿಸಿದ್ದಾರೆ.

ಹುಲಿ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು, ಶಾಸಕರುಗಳು ಹಾಗೂ ವಿಧಾನ ಪರಿಷತ್ ಸದಸ್ಯರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಸರ್ಕಾರ ಕೂಡ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿ ಹುಲಿ ಸೆರೆಗೆ ಕ್ರಮ ಕೈಗೊಂಡಿದೆ.

ಈಗಾಗಲೇ ಶಾಸಕರುಗಳು ದಕ್ಷಿಣ ಕೊಡಗಿನ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ ಅರಣ್ಯಾಧಿಕಾರಿಗÀಳಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಕೆಲವರು ತಮ್ಮ ರಾಜಕೀಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರೈತರ ಹೋರಾಟದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಮಹೇಶ್ ಜೈನಿ ಟೀಕಿಸಿದ್ದಾರೆ.

ಚುನಾವಣೆ ಸಂದರ್ಭ ತಮ್ಮ ರಾಜಕೀಯ ಲಾಭಕ್ಕಾಗಿ ಅಪರೂಪಕೊಮ್ಮೆ ಕೊಡಗಿಗೆ ಬರುವ ಕಾಂಗ್ರೆಸ್‌ನ ಕೆಲವು ನಾಯಕರು ಶಾಸಕರುಗಳ ವಿರುದ್ಧ ಹೇಳಿಕೆ ನೀಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಬೆಂಬಲ ನೀಡುವ ನೆಪದಲ್ಲಿ ಹೋರಾಟದ ಉದ್ದೇಶವನ್ನೇ ಮರೆ ಮಾಚುವ ರೀತಿಯಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ವಿನಾಕಾರಣ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದನ್ನು ಜಿಲ್ಲ್ಲೆ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಪಕ್ಷಾತೀತವಾಗಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕೆ ಹೊರತು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಯಾರೂ ಪ್ರಯತ್ನಿಸಬಾರದೆಂದು ಅವರು ಆಗ್ರಹಿಸಿದ್ದಾರೆ.