ಎಂಎಲ್‌ಸಿ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಸಚಿವ ಅಶೋಕ್ ಮಾಹಿತಿ

ಮಡಿಕೇರಿ, ಮಾ. ೧೭: ಕಳೆದ ತಿಂಗಳು ಶನಿವಾರಸಂತೆ, ನಿಡ್ತ, ಅಂಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆಳೆಹಾನಿ ಸಂಬAಧ ಕೈಗೊಂಡ ಕ್ರಮಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದು, ವಿವರ ಇಂತಿದೆ.

ಫೆ. ೧೯ ರಂದು ಕೊಡಗು ಜಿಲ್ಲೆಯ ಶನಿವಾರಸಂತೆ ಗ್ರಾಮದಲ್ಲಿ ೨೨.೫ ಮಿ.ಮೀ. ಅಂಕನಹಳ್ಳಿ ಹಾಗೂ ನಿಡ್ತ ಗ್ರಾಮಗಳ ವ್ಯಾಪ್ತಿಯಲ್ಲಿ ೨೭ ಮಿ.ಮೀ. ಆಲಿಕಲ್ಲು ಸಹಿತ ಮಳೆಯಾಗಿದೆ. ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾದ ಪ್ರಕರಣಗಳಿಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಬೆಳೆಹಾನಿ ಪ್ರಮಾಣವು ಶೇ. ೩೩ ಕ್ಕಿಂತ ಹೆಚ್ಚಿದ್ದ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಇನ್‌ಪುಟ್ ಸಬ್ಸಿಡಿ ಪಾವತಿಸಲಾಗುತ್ತದೆ. ಪ್ರಾಥಮಿಕ ವರದಿಯಂತೆ ನಿಡ್ತ ಗ್ರಾಮದಲ್ಲಿ ೪ ಎಕರೆ ಹಸಿಮೆಣಸಿನಕಾಯಿ, ೫ ಎಕರೆ ಬಾಳೆ, ೩೦೦ ಎಕರೆ ಕಾಫಿ, ೬೦ ಎಕರೆ ಕಾಳು ಮೆಣಸು, ೧೦ ಎಕರೆ ಶುಂಠಿ, ೫ ಎಕರೆ ಸಿಹಿ ಗೆಣಸು, ೧೨ ಎಕರೆ ಅಡಿಕೆ ಬೆಳೆಹಾನಿಯಾಗಿದೆ. ಅಂಕನಹಳ್ಳಿ ಗ್ರಾಮದಲ್ಲಿ ೧೫ ಎಕರೆ ಜೋಳ, ೫ ಎಕರೆ ಹಸಿಮೆಣಸಿನಕಾಯಿ, ೧೦ ಎಕರೆ ಬಾಳೆ, ೬೦ ಎಕರೆ ಕಾಫಿ, ೩೦ ಎಕರೆ ಕಾಳುಮೆಣಸು, ೬೦ ಎಕರೆ ಶುಂಠಿ, ೨೫ ಎಕರೆ ಸಿಹಿ ಗೆಣಸು, ೨೫ ಎಕರೆ ಅಡಿಕೆ ಬೆಳೆಹಾನಿಯಾಗಿದ್ದು, ಶನಿವಾರಸಂತೆ ಗ್ರಾಮದಲ್ಲಿ ಬೆಳೆಹಾನಿಯಾಗಿಲ್ಲ ಈ ಸಂಬAಧ ಜಂಟಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.