ಮಡಿಕೇರಿ, ಮಾ. ೧೭: ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಬೆಟ್ಟಗಳನ್ನು ಕೊರೆಯುತ್ತಿರುವುದು ಹಾಗೂ ಸಿಲ್ವರ್ ಮುಂತಾದ ಮರಗಳನ್ನು ನೆಡುತ್ತಿರುವದರಿಂದಾಗಿ ಭೂಕುಸಿತಗಳು ಉಂಟಾಗುತ್ತಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಉತ್ತರ ನೀಡಿದ್ದಾರೆ. ಮೇಲ್ಮನೆಯಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.
೨೦೧೮ರ ಪ್ರಾಕೃತಿಕ ವಿಕೋಪ ಸಂದರ್ಭ ಮಲೆತಿರಿಕೆ ಬೆಟ್ಟ, ನೆಹರು ನಗರ ಹಾಗೂ ಅರಸು ನಗರ ಸಮೀಪ ಭೂಮಿ ಬಿರುಕು ಕಾಣಿಸಿಕೊಂಡು ಪ್ರದೇಶವು ಅಪಾಯಕಾರಿಯಾಗಿದ್ದು, ಜನವಸತಿಗೆ ಸೂಕ್ತವಲ್ಲ ಎಂಬ ವರದಿಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಕಳೆದ ಮೂರು ವರ್ಷ ಗಳಿಂದ ಭಯದ ವಾತಾವರಣದಲ್ಲಿ ಬದುಕುತ್ತಿರುವದು ಸರಕಾರದ ಗಮನಕ್ಕೆ ಬಂದಿದೆಯೇ?. ಬಂದಿದ್ದಲ್ಲಿ ಸುರಕ್ಷಿತವಲ್ಲದ ಈ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರ ಮಾಡಿ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸದಿರಲು
(ಮೊದಲ ಪುಟದಿಂದ) ಕಾರಣಗಳೇನು..? ಅತಿಯಾದ ಮಳೆ ಬಂದಲ್ಲಿ ಅಲ್ಲಿ ವಾಸವಿರುವ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಿ ಯಾವಾಗ ಸೂಕ್ತ ಪರಿಹಾರ ಒದಗಿಸಲಾಗುವದು? ಎಂದು ಪ್ರಶ್ನೆ ಕೇಳಿದ್ದರು.
ಇದಕ್ಕೆ ಕಂದಾಯ ಸಚಿವ ಆರ್. ಅಶೋಕ್ ಅವರು, ಈ ಬಗ್ಗೆ ಗಮನಕ್ಕೆ ಬಂದಿದ್ದು, ಅಲ್ಲಿನ ನಿವಾಸಿಗಳಿಗೆ ಪುನರ್‌ವಸತಿ ಕಲ್ಪಿಸಲು ಸ್ಥಳೀಯವಾಗಿ ಸರಕಾರಿ ಜಮೀನು ಲಭ್ಯವಿಲ್ಲದಿರುವದರಿಂದ ಪಟ್ಟಣ ಪಂಚಾಯ್ತಿಯಿAದ ಪ್ರಕಟಣೆ ಹೊರಡಿಸಿ ಬಿಟ್ಟಂಗಾಲದ ಅಂಬಟ್ಟಿ ಗ್ರಾಮದಲ್ಲಿ ಜಾಗ ಖರೀದಿಸಲು ಗುರುತಿಸಲಾಗಿದ್ದು, ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸ್ತಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮಳೆಗಾಲದ ಸಂದರ್ಭದಲ್ಲಿ ವಾಸವಿರುವವರನ್ನು ಕಾಳಜಿ ಕೇಂದ್ರದಲ್ಲಿರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಉತ್ತರ ನೀಡಿದ್ದರು.
ಸಚಿವರ ಈ ಉತ್ತರಕ್ಕೆ ಅಸಮಾಧಾನಗೊಂಡ ವೀಣಾ ಅಚ್ಚಯ್ಯ ಅವರು ಇಂದು ಸದನದಲ್ಲಿ ವಿಷಯ ಪ್ರಸ್ತಾಪಿಸಿ, ಜಾಗ ಖರೀದಿಗೆ ಮುಂದಾಗಿರುವದನ್ನು ಸ್ವಾಗತಿಸುತ್ತೇವೆ, ಆದರೆ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಜಾಗ ಖರೀದಿಸುವದು ಸರಕಾರಕ್ಕೆ ಕಷ್ಟವಾಗಲಿದೆ. ಅಲ್ಲದೆ, ಸಮೀಪದ ಬಾಳುಗೋಡು, ಆರ್ಜಿ,ಕೆದಮುಳ್ಳೂರು, ಬಿಟ್ಟಂಗಾಲದಲ್ಲಿಯೂ ಸರಕಾರಿ ಜಾಗಗಳಿವೆ. ಜಾಗ ಗುರುತಿಸಿ ಸರ್ವೆ ಮಾಡಿ ಮನೆ ನಿರ್ಮಿಸಿಕೊಟ್ಟರೆ ಸುಲಭವಾಗಲಿದೆ. ಖಾಸಗಿ ಜಮೀನು ಖರೀದಿ ಪ್ರಕ್ರಿಯೆ ತಡವಾಗಲಿದೆ. ಅಧಿಕಾರಿಗಳಿಗೆ ಜಾಗ ಗುರುತಿಸಲು ಏನು ಕಷ್ಟ, ಸರಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ನಮ್ಮದೇನು ಅಭ್ಯಂತರವಿಲ್ಲ. ಇನ್ನೂ ಮೂರು ತಿಂಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ, ಅಲ್ಲದೆ, ಇದೀಗ ೬೬ ಮನೆಗಳನ್ನು ಮಾತ್ರ ಅಪಾಯಕಾರಿ ಎಂದು ಗುರುತಿಸಲಾಗಿದೆ. ಆದರೆ ಅಲ್ಲಿ ಸುಮಾರು ೨೫೦೦ಮಂದಿ ವಾಸವಿದ್ದಾರೆ, ಅಷ್ಟು ಮನೆ ಸಾಕಾಗುವದಿಲ್ಲ. ಸರಕಾರಿ ಜಾಗ ಗುರುತಿಸಿ ಸುಲಭವಾಗುವ ರೀತಿಯಲ್ಲಿ ಮಾಡಿ ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶೋಕ್ ಅವರು; ಕೊಡಗಿನ ವೀರಾಜಪೇಟೆಯಲ್ಲಿ ಕಳೆದ ಮೂರು, ನಾಲ್ಕು ವರ್ಷಗಳಿಂದ ಭೂಕುಸಿತವಾಗುತ್ತಿದೆ, ಈಗಾಗಲೇ ಕೇಂದ್ರ ಹಾಗೂ ರಾಜ್ಯ ತಂಡಗಳು ಭೇಟಿ ನೀಡಿ ಪರಿಶೀಲನೆ ಮಾಡಿ, ಸರ್ವೆ ವರದಿ ಸಲ್ಲಿಸಿದೆ. ಅಭಿವೃದ್ಧಿ ಕಾರ್ಯಗಳಿಗಾಗಿ, ರಸ್ತೆಗಾಗಿ ಬೆಟ್ಟವನ್ನು ತುಂಡರಿಸುವದು, ನೈಸರ್ಗಿಕವಾಗಿ ಬೆಳೆಯುತಿದ್ದ ಬೀಟೆ, ಮತ್ತಿ ಇನ್ನಿತರ ಮರಗಳನ್ನು ಬೆಳೆಯುವ ಪದ್ಧತಿ ಬದಲಾಗಿ ಸಿಲ್ವರ್ ಮುಂತಾದ ಮರಗಳನ್ನು ನೆಡುತ್ತಿರುವದರಿಂದ ಅವುಗಳ ಬೇರುಗಳು ಆಳಕ್ಕೆ ಹೋಗದೆ ಇರುವದರಿಂದ, ಇನ್ನಿತರ ಕಾರಣಗಳಿಂದಾಗಿ ಈ ರೀತಿಯಾಗುತ್ತಿದೆ ಎಂದು ವರದಿ ಕೊಟ್ಟಿದ್ದಾರೆ ಎಂದು ಹೇಳಿದರು. ವೀರಾಜಪೇಟೆಗೆ ಸಂಬAಧಿಸಿದAತೆ ಭೂವಿಜ್ಞಾನಿಗಳು ಸರ್ವೆ ಮಾಡಿದ್ದು, ಮಲೆತಿರಿಕೆ ಬೆಟ್ಟದಲ್ಲಿ ೫೭, ನೆಹರು ನಗರದಲ್ಲಿ ೯, ಅರಸುನಗರದಲ್ಲಿ ೫ ಸೇರಿದಂತೆ ಒಟ್ಟು ೭೧ ಮನೆಗಳನ್ನು ಸುರಕ್ಷಿತವಲ್ಲ ಎಂದು ವರದಿ ಸಲ್ಲಿಸಿದ್ದಾರೆ. ಇವರುಗಳಿಗೆ ಅಂಬಟ್ಟಿ ಗ್ರಾಮದಲ್ಲಿ ೭.೮೦ಎಕರೆ ಜಾಗ ಖರೀದಿಗೆ ಗುರುತಿಸಲಾಗಿದೆ. ತಾವು ಒಳ್ಳೆಯ ಸಲಹೆ ನೀಡಿದ್ದೀರಾ, ಒಂದು ವೇಳೆ ಸರಕಾರಿ ಜಾಗ ಲಭ್ಯವಿದ್ದಲ್ಲಿ ಸ.ನಂ. ಕೊಟ್ಟರೆ ಹಣ ಉಳಿತಾಯವಾಗಲಿದೆ. ಮನೆ ಕಟ್ಟಿಕೊಡಲು ಸಹಕಾರಿಯಾಗಲಿದೆ ಎಂದು ವೀಣಾ ಅವರಲ್ಲಿ ಕೋರಿದರು.
ಶಾಶ್ವತ ವ್ಯವಸ್ಥೆ: ಮಳೆಗಾಲಕ್ಕೂ ಮುಂಚೆ ಅಪಾಯಕಾರಿ ಸ್ಥಳದಲ್ಲಿರುವವರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಶಾಲೆ, ಇನ್ನಿತರ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯುವದರಿಂದ ಅಲ್ಲಿ ಸೂಕ್ತ ವ್ಯವಸ್ಥೆಗಳಿರುವದಿಲ್ಲ, ವೈದ್ಯಕೀಯ ಇನ್ನಿತರ ಸೌಲಭ್ಯಗಳಿರುವದಿಲ್ಲ. ಹಾಗಾಗಿ ಶಾಶ್ವತವಾದ ಪರಿಹಾರ ವ್ಯವಸ್ಥೆಯೊಂದಿಗೆ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಕೇಂದ್ರದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ೫ರಿಂದ ೧೦ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಿದ್ದು, ಕೇಂದ್ರದಿAದ ಅನುಮತಿ ದೊರಕುವ ಹಂತದಲ್ಲಿದೆ. ಇತರ ಸಂದರ್ಭಗಳಲ್ಲಿ ಈ ಕೇಂದ್ರಗಳನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ, ಕಾರ್ಯಾಗಾರ ನಡೆಸಲು ಬಳಸಿಕೊಳ್ಳಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ಸದನದ ಗಮನಕ್ಕೆ ತಂದರು.