ಕುಶಾಲನಗರ, ಮಾ. ೧೬: ಕುಶಾಲನಗರ ದಾರುಲ್ ಉಲೂಂ ಮದ್ರಸ ವಿದ್ಯಾಸಂಸ್ಥೆಯಲ್ಲಿ ಜಲಸಂರಕ್ಷಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್.ಕೆ.ಎಸ್.ಬಿ.ವಿ. ವಿದ್ಯಾರ್ಥಿ ಸಂಘಟನೆ ಆಶ್ರಯದಲ್ಲಿ ನಡೆದ ಕಾರ್ಯಕ್ರಮ ದಾರುಲ್ ಉಲೂಂ ಮದ್ರಸ ಕೇಂದ್ರದ ವ್ಯವಸ್ಥಾಪಕ ಉನೈಸ್ ಫೈಝಿ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿಲಾಲ್ ಮಸೀದಿ ಖತೀಬ ಸೂಫಿ ದಾರಿಮಿ ಉದ್ಘಾಟಿಸಿದರು. ಪ್ರಕೃತಿ ಸಂರಕ್ಷಣೆ ಮತ್ತು ಜಲ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಕರೆ ನೀಡಿದರು.
ಸಂದೇಶ ಭಾಷಣ ಮಾಡಿದ ವಿದ್ಯಾಸಂಸ್ಥೆಯ ಪ್ರಾಂಶುಪಾಲ ತಮ್ಲೀಖ್ ದಾರಿಮಿ, ಅನಾವಶ್ಯಕವಾಗಿ ನೀರನ್ನು ಬಳಸುವುದು ಸರಿಯಲ್ಲ ಎಂದರು. ಶುದ್ಧ ನೀರಿನ ಕೊರತೆಯಿಂದ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಚಂದ್ರಮೋಹನ್ ಅವರು ಮಾತನಾಡಿ, ಸ್ವಚ್ಛವಾಗಿ ಹರಿಯುವ ನದಿ ಜಲಮೂಲಗಳನ್ನು ಕಲುಷಿತವಾಗದಂತೆ ಎಚ್ಚರವಹಿಸುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ ಎಂದರು.
ಮದ್ರಸದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಶುಭನುಡಿಗಳನ್ನಾಡಿದರು. ಎಸ್.ಕೆ.ಎಸ್.ಬಿ.ವಿ. ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಫಿ ಸ್ವಾಗತಿಸಿ, ಕೋಶಾಧಿಕಾರಿ ಫಾಜೀಲ್ ವಂದಿಸಿದರು. ವಿದ್ಯಾರ್ಥಿಗಳು ಜಲ ಸಂರಕ್ಷಣೆ ಬಗ್ಗೆ ಪ್ರಬಂಧ ಮಂಡಿಸಿದರು. ಜಲಸಂರಕ್ಷಣೆ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳಿಗೆ ಭಿತ್ತಿಪತ್ರಗಳನ್ನು ರಚಿಸುವುದು ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.