ಭಾರತವು ವಿಶ್ವ ಬೆರಗಾಗುವ ರೀತಿಯಲ್ಲಿ ಆರಂಭಿಸಿರುವ ಈ ಕೋವಿಡ್-೧೯ ವಿರುದ್ಧದ ಲಸಿಕಾ ಅಭಿಯಾನ ಈಗ ಮೂರನೇಯ ಹಂತದಲ್ಲಿದೆ. ನಮ್ಮ ದೇಶದ ಸರಿ ಸುಮಾರು ಮೂರು ಕೋಟಿ ಜನರಿಗೆ ಈಗಾಗಲೇ ಲಸಿಕೆಯನ್ನು ನೀಡುವುದರ ಜೊತೆಗೆ ವಿಶ್ವದ ಎಪ್ಪತ್ತೊಂದು ದೇಶಗಳಿಗೆ ಲಸಿಕೆಯನ್ನು ಕಳಿಸಿರುವ ಭಾರತ ಮಾನವೀಯತೆ ಮೆರೆದಿದೆ.
ಮಾರ್ಚ್ ಒಂದರಿAದ ಆರಂಭವಾದ ಮೂರನೇ ಹಂತದ ಅಭಿಯಾನದಲ್ಲಿ ಅರವತ್ತು ವರ್ಷ ಮೇಲ್ಪಟ್ಟವರಿಗೆ ಮತ್ತು ನಲವತ್ತೆöÊದು ವರ್ಷ ಮೇಲಿದ್ದು ಡಯಾಬಿಟಿಸ್, ಹೃದಯ, ಕಿಡ್ನಿ ಮತ್ತು ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಂದ ನರಳುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಆದರೆ ಕೋವಿಡ್ ಕಾಯಿಲೆಗೆ ಲಸಿಕೆ ಯಾವಾಗ ಬರುವುದೆಂದು ಜಾತಕ ಪಕ್ಷಿಯ ಹಾಗೆ ಕಾಯುತ್ತಿದ್ದ ಜನರು, ಲಸಿಕೆ ಬಂದಾದ ನಂತರ ಅದನ್ನು ಪಡೆಯಲು ಅನುಮಾನ ವ್ಯಕ್ತಪಡಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
ಲಸಿಕೆಗಳು ಕೆಲಸ ಮಾಡುವ ವಿಧಾನ
ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್ ಮಾದರಿಯ ಸೂಕ್ಷಾö್ಮಣುಜೀವಿ ನಮ್ಮ ದೇಹವನ್ನು ಪ್ರವೇಶಿಸಿದ ತಕ್ಷಣ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಆ ಸೂಕ್ಷಾö್ಮಣು ಜೀವಿಯನ್ನು ನಿಸ್ತೇಜಗೊಳಿಸಲು ಕಾರ್ಯತಂತ್ರ ರಚಿಸುತ್ತದೆ. ದೇಹದಲ್ಲಿ ಆ ಸೂಕ್ಷಾö್ಮಣು ಜೀವಿಯ ವಿರುದ್ಧ ಯ್ಯಾನ್ಟಿಬಾಡಿಗಳ ಉತ್ಪಾದನೆ ಮಾಡಲಾಗುತ್ತದೆ. ಹಾಗಾಗಿ ಒಮ್ಮೆ ವೈರಸ್ ಸೋಂಕು ತಗುಲಿದ ನಂತರ ಬಹುತೇಕ ಸಂದರ್ಭಗಳಲ್ಲಿ ಅದೇ ವೈರಸ್ ನಮ್ಮ ದೇಹಕ್ಕೆ ಮತ್ತೊಮ್ಮೆ ಗಂಭೀರವಾದ ಸೋಂಕನ್ನು ನೀಡಲು ಈ ಯ್ಯಾಂಟಿಬಾಡಿಗಳು ಬಿಡುವುದಿಲ್ಲ. ಲಸಿಗೆಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ಸರಳೀಕರಿಸಿ ಹೇಳಬೇಕೆಂದರೆ ಲಸಿಕೆಗಳು ನಮ್ಮ ದೇಹದೊಳಗೆ ಕೃತಕ ಮಾದರಿಯಲ್ಲಿ ಬೇರೆ ಸೂಕ್ಷಾö್ಮಣು ಜೀವಿಯ ವಿರುದ್ಧ ಯ್ಯಾಂಟಿಬಾಡಿಗಳ ಉತ್ಪಾದನೆಯನ್ನು ಮಾಡುತ್ತವೆ.
(ಮೊದಲ ಪುಟದಿಂದ) ಪ್ರಪಂಚದಲ್ಲಿ ಎಷ್ಟು ಮಾದರಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಇವೆಯೋ ಅವೆಲ್ಲದರ ವಿರುದ್ಧ ನಿರ್ದಿಷ್ಟವಾದ ಯ್ಯಾಂಟಿಬಾಡಿಗಳನ್ನು ತಯಾರಿಸುವ ಶಕ್ತಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಗಿದೆ. ಯ್ಯಾಟಿಬಾಡಿ ಉತ್ಪಾದನೆಯಾಗಿರುವ ದೇಹದ ಮೇಲೆ ಮತ್ತದೇ ವೈರಸ್ ಪ್ರವೇಶಿಸಿದಲ್ಲಿ ದೇಹದ ರೋಗನಿರೋಧಕ ಶಕ್ತಿ ವೈರಸ್‌ಗಳನ್ನು ಶೀಘ್ರವಾಗಿ ಸದೆಬಡಿಯುತ್ತದೆ. ಕೋವಿಡ್ ವಿರುದ್ಧದ ಲಸಿಕೆ ಕೂಡ ಇದೇ ಕೆಲಸವನ್ನು ಮಾಡುತ್ತದೆ.
ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪೆನಿಯ ಕೋವ್ಯಾಕ್ಸಿನ್ ಲಸಿಕೆ ಮತ್ತು ಸೀರಮ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಈ ಕೋವಿಡ್ ಲಸಿಕಾಕರಣದ ಅಭಿಯಾನದಲ್ಲಿ ಬಳಸಲಾಗುತ್ತಿದೆ. ಈ ಎರಡೂ ಲಸಿಕೆಗಳಲ್ಲಿ ಯಾವುದನ್ನಾದರು ಪಡೆಯಬಹುದು. ನಮ್ಮ ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾವು ಶಿಶುಗಳ ಲಸಿಕಾಕರಣ ನಡೆಸುವ ಕಾರಣ ಲಸಿಕೆಗಳನ್ನು ಶೀತಲ ವಾತಾವರಣದಲ್ಲಿ ಸಂರಕ್ಷಣೆ ಮಾಡಲು ವ್ಯವಸ್ಥೆಯಿರುವುದರಿಂದ ಕೊಡಗಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಅಭಿಯಾನವು ಈಗಾಗಲೇ ಶುರುವಾಗಿದೆ.
ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬರಲು ಲಸಿಕೆಯ ಎರಡು ಚುಚ್ಚುಮದ್ದುಗಳನ್ನು ಪಡೆಯಬೇಕಾಗಿದೆ. ಮೊದಲ ಡೋಸ್ ಪಡೆದ ನಾಲ್ಕು ವಾರಗಳ ನಂತರ ಎರಡನೇ ಡೋಸನ್ನು ನೀಡಲಾಗುತ್ತದೆ. ಈ ಚುಚ್ಚುಮದ್ದುನ್ನು ನೀಡಿದ ತದನಂತರ ಲಸಿಕೆ ಪಡೆದವರನ್ನು ಅರ್ಧ ಗಂಟೆಗಳ ಕಾಲ ಲಸಿಕೆ ಉಂಟುಮಾಡಬಹುದಾದ ಎಲರ್ಜಿ ಅಥವಾ ಪರಿಣಾಮಗಳಿಗೆ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗುತ್ತದೆ. ಈ ಲಸಿಕೆ ಹೆಚ್ಚೆಂದರೆ ಚುಚ್ಚುಮದ್ದು ನೀಡಿದ ಜಾಗದಲ್ಲಿ ನೋವು ಮತ್ತು ಜ್ವರವನ್ನು ಅಲ್ಪ ಸ್ವಲ್ಪ ಜನರಲ್ಲಿ ಉಂಟುಮಾಡಿದ್ದು ಬಿಟ್ಟರೆ ಬೇರೆ ಗಂಭೀರವಾದ ಯಾವುದೇ ತೊಂದರೆಗಳನ್ನು ನೀಡಿಲ್ಲ. ಲಸಿಕೆಯ ಎರಡನೇ ಡೋಸ್ ಪಡೆದ ಒಂದು ತಿಂಗಳ ನಂತರ ದೇಹದಲ್ಲಿ ಯ್ಯಾಂಟಿಬಾಡಿಗಳು ಉತ್ಪಾದನೆಯಾಗಿ ಕೋವಿಡ್ ವಿರುದ್ಧದ ರೋಗನಿರೋಧಕ ಶಕ್ತಿ ಬರುತ್ತದೆ.
ಹಿಂದೆ ಕೋವಿಡ್ ಸೋಂಕಿಗೆ ತುತ್ತಾದವರೂ ಲಸಿಕೆಯನ್ನು ಪಡೆಯಬಹುದು. ಬೇರೆ ಕಾಯಿಲೆಗಳಿಗೆ ಔಷಧಿಗಳನ್ನು ಪಡೆಯುವವರಿಗೂ ಕೋವಿಡ್ ಲಸಿಕೆಯಿಂದ ಯಾವುದೇ ತೊಂದರೆಗಳಾಗುವುದಿಲ್ಲ. ಕೋವಿಡ್ ಲಸಿಕೆ ಪಡೆದ ನಂತರವೂ ನಿಮ್ಮ ದೇಹದಲ್ಲಿ ಕೋವಿಡ್ ಸೋಂಕು ಬರಬಹುದು. ಆದರೆ ನಿಮ್ಮಲ್ಲಿ ಆ ವೈರಸ್ ವಿರುದ್ಧ ಯ್ಯಾಂಟಿಬಾಡಿಗಳು ಈಗಾಗಲೇ ಇರುವುದರಿಂದ ಕೋವಿಡ್ ವೈರಸ್ ಯಾವುದೇ ಗಂಭೀರವಾದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಹಾಗಾಗಿ ಕೋವಿಡ್ ಲಸಿಕೆ ಪಡೆದವರೂ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯ.
ಯಾವುದೇ ಒಂದು ಲಸಿಕೆಯನ್ನು ಜನರ ಮೇಲೆ ಬಳಸುವ ಮಾಡುವ ಮೊದಲು ಅದರ ಸುರಕ್ಷತೆಯ ಬಗ್ಗೆ ಅನೇಕ ಪರೀಕ್ಷೆಗಳನ್ನು ಮಾಡಲಾಗಿರುತ್ತದೆ. ಕೋವಿಡ್ ಲಸಿಕೆಯ ಪರೀಕ್ಷೆಗಳಲ್ಲಿ ಗರ್ಭಿಣಿಯರು ಮತ್ತು ಹದಿನೆಂಟು ವರ್ಷಗಳಿಗಿಂತ ಚಿಕ್ಕವರು ಭಾಗವಹಿಸದೇ ಇದ್ದ ಕಾರಣ ಈ ಲಸಿಕೆಯನ್ನು ಮಕ್ಕಳಲ್ಲಿ ಮತ್ತು ಗರ್ಭಿಣಿಯರಿಗೆ ನೀಡಲಾಗುವುದಿಲ್ಲ. ಕೋವಿಡ್ ವಿರುದ್ಧದ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಾಗ ಯಾರಲ್ಲಾದರೂ ಗಂಭೀರ ವಾದ ಅಲರ್ಜಿ ಉಂಟಾದಲ್ಲಿ ಮಾತ್ರ ಅವರಿಗೆ ಎರಡನೆಯ ಡೋಸನ್ನು ತಡೆಹಿಡಿಯಲಾಗುತ್ತದೆ. ಈ ಎರಡು ವರ್ಗದ ಜನರು ಬಿಟ್ಟರೆ ಮಿಕ್ಕವರು ಯಾವುದೇ ಅಂಜಿಕೆಗಳಿಲ್ಲದೆ ಲಸಿಕೆಯನ್ನು ಶೀಘ್ರವಾಗಿ ಸ್ವೀಕರಿಸಿದರೆ ಉತ್ತಮ.
ಲಸಿಕೆಯನ್ನು ಪಡೆಯುವ ಬಗೆ
ಅರವತ್ತು ವರ್ಷದ ಮೇಲ್ಪಟ್ಟವರು ತಮ್ಮ ಫೋಟೋ ಐಡಿ ಯಾ ಆಧಾರ್ / ವೋಟರ್ ಐಡಿ ಜೊತೆಗೆ ತಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿದಲ್ಲಿ ನಿಮ್ಮ ಹೆಸರನ್ನು ಅಲ್ಲಿ ನೋಂದಣಿ ಮಾಡಲಾಗುತ್ತದೆ. ನಿಮ್ಮ ಮೊಬೈಲ್‌ಗೆ ಓಟಿಪಿ ಬಂದ ನಂತರ ನಿಮಗೆ ಲಸಿಕೆಯನ್ನು ನೀಡಿ ಅರ್ಧ ಗಂಟೆ ನಿಮ್ಮ ಬಗ್ಗೆ ನಿಘಾವಹಿಸಿ ನಂತರ ಮನೆಗೆ ಕಳಿಸಲಾಗುತ್ತದೆ. ೪೫ ವರ್ಷ ಮೇಲಿದ್ದು ಬೇರೆ ಗಂಭೀರವಾದ ಕಾಯಿಲೆಗಳಿಂದ ಬಳಲುವವರು ತಮ್ಮ ಕಾಯಿಲೆಯ ಬಗ್ಗೆ ವೈದ್ಯರಿಂದ ದೃಢೀಕರಣ ಪತ್ರವನ್ನು ತಂದಲ್ಲಿ ಅವರಿಗೂ ಲಸಿಕೆಯನ್ನು ನೀಡಲಾಗುತ್ತದೆ.
ಕೊಡಗಿನ ಸೂರ್ಲಬ್ಬಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂತರ್ಜಾಲ ವ್ಯವಸ್ಥೆ ಇಲ್ಲದಿರುವುದರಿಂದ ಮತ್ತು ಮಡಿಕೇರಿಯ ಅರ್ಬನ್ ಆರೋಗ್ಯ ಕೇಂದ್ರದಲ್ಲಿ ಸ್ಥಳಾವಕಾಶದ ಕೊರತೆಯಿರುವುದರಿಂದ ಈ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತು ಪಡಿಸಿ ಇತರ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನೀವು ಲಸಿಕೆಯನ್ನು ಪಡೆಯಬಹುದು.
ಮೇಜರ್| ಡಾ| ಕುಶ್ವಂತ್ ಕೋಳಿಬೈಲು,
ಮಕ್ಕಳ ತಜ್ಞ, ಮಡಿಕೇರಿ