ಸಿದ್ದಾಪುರ, ಮಾ. ೧೬: ಕುಶಾಲನಗರ ತಾಲೂಕು ಆದ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿಯ ಕಾವೇರಿ ತಾಲೂಕು ಹೋರಾಟ ಸಮಿತಿಯ ವತಿಯಿಂದ ನೆಲ್ಲಿಹುದಿಕೇರಿ ಯಲ್ಲಿ ವಿಜಯೋತ್ಸವ ಆಚರಣೆ ಹಾಗೂ ಅಭಿನಂದನೆ ಸಮಾರಂಭ ಸಂಭ್ರಮದಿAದ ನಡೆಯಿತು.
ನೆಲ್ಲಿಹುದಿಕೇರಿಯ ಸಮೀಪದ ಕಾವೇರಿ ನದಿಯ ಸೇತುವೆ ಬಳಿಯಿಂದ ವಾದ್ಯಗೋಷ್ಠಿ, ಡೊಳ್ಳು ಕುಣಿತ, ಮಾಲ್ದಾರೆಯ ಶಾಜಿ ತಂಡದೊAದಿಗೆ ಚಂಡೆ, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಮೆರವಣಿ ಗೆಯ ಮೂಲಕ ನೆಲ್ಲಿಹುದಿಕೇರಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕಾವೇರಿ ತಾಲೂಕಿನ ಪರ ಘೋಷಣೆಯನ್ನು ಕೂಗಿದರು. ನಂತರ ಸಮಾರಂಭವು ನೆಲ್ಲಿಹುದಿಕೇರಿಯ ಶಾದಿ ಮಹಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋರಾಟ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್ ವಹಿಸಿದ್ದರು.
ಸಮಾರಂಭದಲ್ಲಿ ವಸಂತ ಕುಮಾರ್ ಹೊಸಮನೆ ಮಾತನಾಡಿ ಸುಮಾರು ೨೦ ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಕುಶಾಲನಗರ ತಾಲೂಕು ಆಗಿದೆ. ಸೋಮವಾರಪೇಟೆ ತಾಲೂಕು ಕಚೇರಿಗೆ ನೆಲ್ಲಿಹುದಿಕೇರಿ ಯಿಂದ ತೆರಳಬೇಕಾದರೆ ಸುಮಾರು ೬೦ ಕಿ.ಮೀ.ಗಳಷ್ಟು ದೂರ ಹೋಗಬೇಕಾಗಿತ್ತು. ಇದರಿಂದಾಗಿ ಸಮಸ್ಯೆಗಳು ಕೂಡ ಎದುರಾಗಿತ್ತು. ಇದಲ್ಲದೇ ಸಕಾಲಕ್ಕೆ ಕಡತಗಳ ಕೆಲಸ ಕಾರ್ಯಗಳು ಆಗದೇ ವಿಳಂಬ ವಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರ ಪ್ರಯತ್ನದಿಂದಾಗಿ ಕುಶಾಲನಗರ ತಾಲೂಕು ರಚನೆ ಆಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ; ೨೦ ವರ್ಷಗಳ ಹಿಂದೆ ಹೋರಾಟದ ಬೀಜ ಬಿತ್ತನೆ ಮಾಡಿದ ಫಲ ಇದೀಗ ಲಭಿಸಿದೆ ಎಂದರು. ಕಾವೇರಿ ದಡದಿಂದ ಹೇಮಾವತಿ ದಡದವರೆಗೆ ಸುಮಾರು ೧೦೦ ಕಿ.ಮೀ. ದೂರದ ಗ್ರಾಮಸ್ಥರು ಕೂಲಿ ಕಾರ್ಮಿಕರು ತಾಲೂಕು ಕಚೇರಿ ಸೋಮವಾರ ಪೇಟೆಗೆ ಅಲೆದಾಡುವು ದನ್ನು ನೂತನ ತಾಲೂಕಿನಿಂದಾಗಿ ತಪ್ಪಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ೨೦೦೮ರಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಆಡಳಿತ ಮಂಡಳಿ ಕುಶಾಲನಗರ ತಾಲೂಕು ಮಾಡಬೇಕೆಂದು ಬೆಂಗಳೂರಿಗೆ ನಿಯೋಗ ತೆರಳಿ ಒತ್ತಡ ಹೇರಿತ್ತು ಎಂದು ತಿಳಿಸಿದರು. ನೂತನ ತಾಲೂಕಿನಿಂದಾಗಿ ಮುಂದಿನ ಪೀಳಿಗೆಗೆ ಅನುಕೂಲಕರವಾಗುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಎಂ.ವಿ. ಶಾಂತ ಕುಮಾರ್ ಕುಶಾಲನಗರ ತಾಲೂಕಿಗಾಗಿ ಜಾತ್ಯತೀತವಾಗಿ, ರಾಜಕೀಯ ರಹಿತವಾಗಿ ಗ್ರಾಮಸ್ಥರು ಒಗ್ಗಟ್ಟಿನಿಂದ ಹೋರಾಟ ಮಾಡಿದ್ದಾರೆ. ಜನಪ್ರತಿ ನಿಧಿಗಳ ಭಿನ್ನಾಭಿಪ್ರಾಯ ಗಳಿಂದಾಗಿ ತಾಲೂಕು ಆಗಲು ವಿಳಂಬವಾಗಿದೆ ಎಂದರು. ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ ಗ್ರಾಮಸ್ಥರು ಒಗ್ಗಟ್ಟಿನಿಂದಾಗಿ ಹೋರಾಟ ಮಾಡಿದ ಫಲವಾಗಿ ಕುಶಾಲನಗರ ತಾಲೂಕು ರಚನೆ ಆಗಿದೆ. ಈ ಹಿನ್ನೆಲೆಯಲ್ಲಿ ಚೆಟ್ಟಳ್ಳಿ ಗ್ರಾಮವನ್ನು ಕೂಡ ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳಿಸಿರುವುದು ಉತ್ತಮ ಕಾರ್ಯ ಎಂದು ಹೇಳಿದರು.
ಕಾವೇರಿ ತಾಲೂಕಿನ ಹೋರಾಟದ ಕೇಂದ್ರ ಸಮಿತಿಯ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ; ನೆಲ್ಲಿಹುದಿಕೇರಿ ಯ ಗ್ರಾಮಸ್ಥರು ಹೋರಾಟದ ಮನೋಭಾವವುಳ್ಳ ವರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬ್ರಿಟಿಷರ ಕಾಲದಲ್ಲಿ ವಿಶೇಷ ಕಾನೂನಿನ ಮೂಲಕ ಕೊಡಗು ಜಿಲ್ಲೆಯಲ್ಲಿ ೫ ತಾಲೂಕುಗಳನ್ನು ರಚನೆ ಮಾಡಲಾಗಿತ್ತು. ನಂತರ ೧೯೫೬ರಲ್ಲಿ ಮೈಸೂರಿನೊಂದಿಗೆ ವಿಲೀನ ಮಾಡುವ ಸಂದರ್ಭದಲ್ಲಿ ೫ ತಾಲೂಕುಗಳ ಬದಲು ೩ ತಾಲೂಕು ಮಾಡಲಾಯಿತು ಎಂದು ಮಾಹಿತಿ ನೀಡಿದರು. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಅವಧಿಯಲ್ಲಿ ಕುಶಾಲನಗರ ತಾಲೂಕು ಮಾಡುವ ಕಲ್ಪನೆಯನ್ನು ಹೊಂದಿದ್ದರು ಎಂದು ನಾಗೇಂದ್ರ ಬಾಬು ಸ್ಮರಿಸಿಕೊಂಡರು. ಅದರ ಭಾಗವಾಗಿ ಇದೀಗ ಕುಶಾಲನಗರ ತಾಲೂಕು ಆಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಕಂದಾಯ ಇಲಾಖೆಯ ಸೌಲಭ್ಯ ಲಭಿಸಬೇಕೆಂದು ತಿಳಿಸಿದರು.
ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ ಮಾತನಾಡಿ; ಕುಶಾಲನಗರ ತಾಲೂಕು ಆಗಿರುವ ಹಿನ್ನೆಲೆಯಲ್ಲಿ ನೆಲ್ಯಹುದಿಕೇರಿ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲ ವಾಗಿದೆ. ಕಂದಾಯ ಇಲಾಖೆಗಳ ಕಡತಗಳಿಗೆ ಅಲೆದಾಡುವ ಕೆಲಸ ಕಡಿಮೆಯಾಗಿದೆ ಎಂದರು.
ಕಾವೇರಿ ತಾಲೂಕು ಹೋರಾಟದ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ; ಕರ್ನಾಟಕ ರಾಜ್ಯದಲ್ಲಿ ಇಂತಹ ಸುದೀರ್ಘ ಹೋರಾಟ ನಡೆದಿಲ್ಲ. ಸಂಘಟಿತರಾಗಿ ತಾಲೂಕು ರಚನೆ ಮಾಡುವ ಬೇಡಿಕೆಯನ್ನು ಇಟ್ಟು ಹೋರಾಟ ಮಾಡಿದ ಫಲ ಇದೀಗ ಕುಶಾಲನಗರ ತಾಲೂಕು ಆಗಿದೆ ಎಂದರು. ಕುಶಾಲನಗರ ತಾಲೂಕು ರಚನೆ ಮಾಡಲು ಎಲ್ಲಾ ರೀತಿಯ ಅರ್ಹತೆಗಳಿದ್ದರೂ ಕೂಡ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ತಾಲೂಕು ಆಗಲು ವಿಳಂಬವಾಗಿದೆ ಎಂದರು.
ಕುಶಾಲನಗರ ತಾಲೂಕು ರಚನೆ ಹೋರಾಟ ಮಾಡುವ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು, ಅಡತಡೆಗಳು, ಅಪಪ್ರಚಾರಗಳು, ಗೇಲಿ ಮಾಡುತ್ತಿದ್ದರು. ಆದರೂ ಕೂಡ ಛಲ ಬಿಡದೇ ೨೦೦೦ ಇಸವಿಯಿಂದಲೇ ಹೋರಾಟ ಮಾಡಲಾಯಿತು. ಇದರ ಫಲವಾಗಿ ಇದೀಗ ಕುಶಾಲನಗರ ತಾಲೂಕು ಆಗಿದೆ. ಹೋರಾಟದ ಸಂದರ್ಭದಲ್ಲಿ ಸಂಕಲ್ಪ ಹಾಗೂ ದೀಕ್ಷೆ ತೊಟ್ಟು ೧೨೦ ದಿನಗಳ ಸರದಿ ಹೋರಾಟ ಮಾಡಲಾಯಿತು. ಕುಶಾಲನಗರ ಪಟ್ಟಣ ಆಗಿಂದಾಗ್ಗೆ ಬಂದ್ ಮಾಡುವ ಮೂಲಕ ಹೋರಾಟ ಮಾಡಿ ಜನರ ಬೆಂಬಲದಿAದಾಗಿ ಹೊಸ ತಾಲೂಕು ಆಗಿದೆ ಎಂದರು. ಈ ಹಿನ್ನೆಲೆಯಲ್ಲಿ ೨೩೨ ಉಪ ಕಂದಾಯಗಳ ಗ್ರಾಮಗಳಿವೆ. ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿದ್ದು, ಇವರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ ಸಾಬು ವರ್ಗೀಸ್, ಮಾಜಿ ಅಧ್ಯಕ್ಷೆ ಪದ್ಮಾವತಿ, ಗ್ರಾ.ಪಂ. ಸದಸ್ಯೆ ಸೆಫಿಯಾ, ತಾ.ಪಂ. ಸದಸ್ಯೆ ಸುಹದಾ, ಕಾವೇರಿ ತಾಲೂಕು ಹೋರಾಟ ಸಮಿತಿ ಪದಾಧಿಕಾರಿ ಗಳಾದ ಅಬ್ದುಲ್ ಕರೀಂ, ಮೋಳಿ ಅನ್ನಮ್ಮ, ಎಂ.ವಿ. ನಾರಾಯಣ, ಎಂ.ಕೆ. ಮೋಹನ್ ಕುಮಾರ್, ಕೆ.ಎಸ್. ರಾಜಶೇಖರ್, ಕೆ.ಎಂ. ದೇವರಾಜ್, ಮುಸ್ತಫಾ, ಇನ್ನಿತರರು ಹಾಜರಿದ್ದರು. ಓ.ಸಿ. ಅಶೋಕ್ ಸ್ವಾಗತಿಸಿ, ವಾರೀಜಾ ಭರತ್ ನಿರೂಪಿಸಿದರು.
ಚಿತ್ರ, ವರದಿ: ವಾಸು ಎ.ಎನ್.