(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮಾ. ೧೬: ಜಿಲ್ಲೆಯಲ್ಲಿ ಪ್ರತಿಷ್ಠಿತ ಪಂಚಾಯಿತಿಗಳಾದ ವಾಣಿಜ್ಯ ನಗರ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಪಂಚಾಯಿತಿಗಳಿಗೆ ಚುನಾವಣೆ ನಿಗದಿಯಾಗಿದೆ. ತಾ. ೨೯ ರಂದು ಅವಳಿ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ವಾರ್ಷಿಕವಾಗಿ ಅತ್ಯಧಿಕ ವರಮಾನವಿರುವ ಗೋಣಿಕೊಪ್ಪಲುವಿನ ಪಂಚಾಯಿತಿಗೆ ೨೧ ಸದಸ್ಯರ ಆಯ್ಕೆ ಆಗಬೇಕಾಗಿದೆ. ನೂತನ ತಾಲೂಕು ಕೇಂದ್ರದಲ್ಲಿರುವ ಪೊನ್ನಂಪೇಟೆ ಪಂಚಾಯಿತಿಗೆ ೨೦ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಯಾವುದೇ ಚುನಾವಣೆಗೆ ಕಡಿಮೆ ಇಲ್ಲದಂತೆ ಎರಡು ಪಂಚಾಯಿತಿಗಳಿಗೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯದಿದ್ದರೂ ಸಹಜವಾಗಿಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ನಿಗೂಢ ಸ್ಥಳಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ, ಗೆಲುವಿನ ಅಭ್ಯರ್ಥಿಗಳಿಗಾಗಿ ಹುಡುಕಾಟ ಸೇರಿದಂತೆ ಇನ್ನಿತರ ರಾಜಕೀಯ ತಂತ್ರಗಾರಿಕೆ ಜೋರಾಗಿ ನಡೆಯುತ್ತಿದೆ. ಈಗಾಗಲೇ ಈ ಮೂರು ಸುತ್ತುಗಳ ಸಭೆ ನಡೆಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ವಿವಿಧ ವಾರ್ಡ್ಗಳಿಗೆ ಜನಬೆಂಬಲವಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಮತ ಪ್ರಚಾರ ನಡೆಸಲು ಆರಂಭಿಸಿದ್ದಾರೆ.
ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಗ್ರಾಮ ಪಂಚಾಯಿತಿಗಳು ಈ ಹಿಂದೆ ಪುರಸಭೆಯಾಗಿತ್ತು. ನಂತರ ಮಂಡಲ ಪಂಚಾಯಿತಿಯಾಗಿ, ಗ್ರಾಮ ಪಂಚಾಯಿತಿಯಾಗಿ ಬದಲಾವಣೆಗೊಂಡ ಕಾರಣ ಕೊಡಗು ಜಿಲ್ಲೆಯಲ್ಲಿ ಉಭಯ ಗ್ರಾ.ಪಂ.ಗಳಿಗೆ ಪ್ರತ್ಯೇಕ ಚುನಾವಣೆ ನಡೆಯುತ್ತಿದೆ.
ಕಳೆದ ಅವಧಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ೨೧ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ೧೪ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದರೂ ಅಧ್ಯಕ್ಷಗಾದಿಯೂ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯು ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನ ಪಡೆಯುವ ಅವಕಾಶವಿದ್ದರೂ ಬಿಜೆಪಿಯೊಂದಿಗಿನ ಒಳ ಒಪ್ಪಂದದಿAದಾಗಿ ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಇದನ್ನು ಸದುಪಯೋಗಪಡಿಸಿಕೊಂಡ ಬಿಜೆಪಿ ಮುಖಂಡರು ಉಪಾಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ತದನಂತರದ ವರ್ಷಗಳಲ್ಲಿ ಅಭಿವೃದ್ಧಿ ಕಾಣಬೇಕಾದ ಪಂಚಾಯಿತಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಅಭಿವೃದ್ಧಿ ಶೂನ್ಯವಾಯಿತು. ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕೆಲವು ಕಾಮಗಾರಿಗಳು ಅನುಷ್ಠಾನಗೊಂಡವು ಕೆಲವೇ ಕೆಲವು ವಾರ್ಡ್ಗಳಲ್ಲಿ ಪಂಚಾಯಿತಿ ಅನುದಾನದ ಕಾಮಗಾರಿಗಳು ನಡೆದಿವೆ. ಬಹುಮುಖ್ಯವಾದ ಕಸ ವಿಲೇವಾರಿ, ಬಸ್ ನಿಲ್ದಾಣ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಯಶ ಕಾಣಲಿಲ್ಲ. ದಿನಗಟ್ಟಲೆ ಮಾಸಿಕ ಸಭೆಗಳನ್ನು ನಡೆಸಿದರಾದರೂ ಅಭಿವೃದ್ಧಿಯ ವಿಚಾರದಲ್ಲಿ ಸದಸ್ಯರು ಮೌನವಹಿಸಿದ್ದರು.
ಪೊನ್ನಂಪೇಟೆ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಅಧಿಕಾರ ಹಿಡಿದಿದ್ದರು. ಈ ಎರಡು ಪಂಚಾಯಿತಿಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸರ್ವ ಪ್ರಯತ್ನಕ್ಕೆ ಮುಂದಾಗಿದೆ. ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಕರೆ ತರುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಪಕ್ಷಕ್ಕೆ ಕರೆ ತರುವ ಅಭ್ಯರ್ಥಿಗಳಿಗೆ ಗೆಲುವು ಸಾಧಿಸುವ ವಾರ್ಡ್ಗಳಲ್ಲಿ ಪಕ್ಷದ ವತಿಯಿಂದ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ. ಗೊಂದಲವಿರುವ ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಯುತ್ತಿದೆ.
ಉಳಿದ ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರುಗಳು ನಗರದಲ್ಲಿ ಮೊಖ್ಖಾಂ ಹೂಡಿದ್ದು ಕಾರ್ಯತಂತ್ರ ರೂಪಿಸುತ್ತಿದ್ದಾರೆ.ಗೋಣಿಕೊಪ್ಪ ಪಂಚಾಯಿತಿಯಲ್ಲಿ ಆರಂಭದಿAದಲೂ ಕಾಂಗ್ರೆಸ್ ಪಕ್ಷದಿಂದ ಗುರುತಿಸಿಕೊಂಡು ಹಲವು ಉನ್ನತ ಸ್ಥಾನಗಳನ್ನು ಪಡೆದಿದ್ದ ಅನುಭವಿ ಸದಸ್ಯರಾಗಿದ್ದ ಬಿ.ಎನ್. ಪ್ರಕಾಶ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೆಳೆದು ತರುವಲ್ಲಿ ಯಶಸ್ವಿಯಾಗಿದ್ದಾರೆ. ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ ಗಣೇಶ್ ಅವರನ್ನು ಬಿಜೆಪಿ ಪಕ್ಷಕ್ಕೆ ಕರೆ ತರುವ ಪ್ರಯತ್ನ ನಡೆಸಿದರಾದರೂ ಕೊನೆ ಘಳಿಗೆಯಲ್ಲಿ ಯಶಸ್ವಿಯಾಗಲಿಲ್ಲ. ವಿವಿಧ ವಾರ್ಡ್ಗಳಲ್ಲಿ ವಿವಿಧ ಪಕ್ಷದಿಂದ ಬೆಂಬಲ ಕೋರಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಬೆಂಬಲ ಸಿಗದಿರುವುದನ್ನು ಮನಗಂಡು ತಾವೇ ಪಕ್ಷೇತರರಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ. ಇಂತಹ ಅಭ್ಯರ್ಥಿಗಳನ್ನು ಮನವೊಲಿಸುವ ಪ್ರಯತ್ನವೂ ಉಭಯ ಪಕ್ಷಗಳ ನಾಯಕರುಗಳಿಂದ ನಡೆಯುತ್ತಿದೆ.
ಒಟ್ಟಿನಲ್ಲಿ ಎರಡು ಪಂಚಾಯಿತಿಯ ಚುನಾವಣೆಗಳು ಪ್ರತಿಷ್ಠಿತ ಕಣವಾಗಿ ಮಾರ್ಪಟ್ಟಿದೆ.