ಮಡಿಕೇರಿ, ಮಾ. ೧೫: ಸೋಮವಾರಪೇಟೆ ತಾಲೂಕಿನ ಚಿಕ್ಲಿಹೊಳೆ ಜಲಾಶಯದ ಬಳಿ ಸಾಕಾನೆ ಶಿಬಿರ ಸ್ಥಾಪನೆ ಮಾಡಿದ್ದಲ್ಲಿ ಅರಣ್ಯ ಇಲಾಖೆಗೆ ಉಪಯೋಗ ವಾಗುವುದಿಲ್ಲವೇ. ಇದಕ್ಕೆ ಸರಕಾರದ ಚಿಂತನೆ ಏನು? ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮೇಲ್ಮನೆಯಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಆನೆ ಶಿಬಿರ ಗಳಲ್ಲಿ ಹೆಚ್ಚಿನ ಸಂಖ್ಯೆಯ ಆನೆಗಳಿಗಾಗಿ ಹೊಸ ಸಾಕಾನೆ ಶಿಬಿರ ವನ್ನು ಸ್ಥಾಪಿಸಿ, ಸ್ಥಳಾಂತರಿಸಲು ಸೂಚಿಸಲಾಗಿರುತ್ತದೆ. ಅದರಂತೆ ಕುಶಾಲನಗರ ವಲಯ ವ್ಯಾಪ್ತಿಯ ಅತ್ತೂರು ಶಾಖೆಯ ಹಾರಂಗಿ ಜಲಾಶಯದ ಟ್ರೀ ಪಾರ್ಕ್ ಬಳಿ ಹೊಸ ಸಾಕಾನೆ ಶಿಬಿರ ಸ್ಥಾಪಿಸಲು ೧೨.೦೨. ೨೦೨೧ ರಂದು ಅನುಮತಿ ನೀಡ ಲಾಗಿದ್ದು, ಇದಕ್ಕೆ ಬೇಕಿರುವ ಮೂಲಭೂತ ಸೌಕರ್ಯ ಅಭಿವೃದ್ಧಿಯ ಕಾಮ ಗಾರಿಗಳನ್ನು ಕೈಗೊಳ್ಳಲು ಕೊಡಗು ವನ್ಯಪ್ರಾಣಿ ಸಂಘರ್ಷ ಉಪಶಮನ ಪ್ರತಿಷ್ಠಾನ ನಿಧಿಯಡಿ ಭರಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಆನೆ ಶಿಬಿರದಲ್ಲಿ ೩೧ ಆನೆಗಳಿದ್ದು, ಅದನ್ನು ಪೋಷಿಸಲು ೧೬ ಖಾಯಂ ಮಾವುತರು, ೧೦ ಹೊರಗುತ್ತಿಗೆ ಮಾವುತರಿದ್ದಾರೆ ಎಂದು ಸಚಿವರು ಉತ್ತರಿಸಿದರು.