ಕುಶಾಲನಗರ, ಮಾ. ೧೫: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರದ ಐತಿಹಾಸಿಕ ಕೆರೆಗಳ ಅಭಿವೃದ್ಧಿಯ ಯೋಜನೆಗೆ ಇದೀಗ ಕಾಯಕಲ್ಪ ಕಲ್ಪಿಸಲು ಸ್ಥಳೀಯ ಆಡಳಿತಗಳು ಮುಂದಾಗಿದೆ. ಈ ಹಿನ್ನೆಲೆ ತಾಲೂಕು ಸರ್ವೆ ಅಧಿಕಾರಿಗಳು ಸ್ಥಳೀಯ ಆಡಳಿತಗಳ ಮನವಿ ಮೇರೆಗೆ ಕೆರೆಗಳ ಗಡಿಗುರುತು ಮಾಡುವ ಸರ್ವೆ ಕಾರ್ಯ ನಡೆಸಿ ಕೆರೆಗಳನ್ನು ಕಂದಾಯ ಅಧಿಕಾರಿಗಳ ಮೂಲಕ ಸ್ಥಳೀಯ ಆಡಳಿತದ ಅಭಿವೃದ್ಧಿಗೆ ಸದ್ಯದಲ್ಲೇ ಒಪ್ಪಿಸಲಿದ್ದಾರೆ.

ಕುಶಾಲನಗರ ಮಡಿಕೇರಿ ರಸ್ತೆಯಲ್ಲಿರುವ ತಾವರೆಕೆರೆ ಮತ್ತು ಕೂಡಿಗೆ ರಸ್ತೆಯ ಒತ್ತಿನಲ್ಲಿರುವ ಸೋಮೇಶ್ವರ ದೇವರ ಕೆರೆಗಳ ಗಡಿ ಗುರುತು ಕಾರ್ಯ ಸಂಪೂರ್ಣವಾಗಿದ್ದು, ಸದ್ಯದಲ್ಲಿಯೇ ಈ ಕೆರೆಗಳ ಅಭಿವೃದ್ಧಿ ಯೋಜನೆ ನಡೆಯಲಿದೆ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎA. ಚರಣ್ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ತಿಳಿಸಿದ್ದಾರೆ. ಕೆರೆಗಳು ಬಹುತೇಕ ಒತ್ತುವರಿಯಾಗುತ್ತಿದ್ದು ಕೂಡಲೇ ಗಡಿ ಗುರುತು ಮಾಡುವ ಮೂಲಕ ಕೆರೆಗಳ ಅಸ್ತಿತ್ವವನ್ನು ಉಳಿಸಿ ಅಭಿವೃದ್ಧಿಗೊಳಿಸುವಂತೆ ಸ್ಥಳೀಯ ಕಾವೇರಿ ರಿವರ್ ಸೇವಾ ಟ್ರಸ್ಟ್ ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಆಡಳಿತ ಮಂಡಳಿ ಸಭೆಗಳಲ್ಲಿ ಚರ್ಚಿಸಿ ಶಾಸಕರ ಸೂಚನೆಯಂತೆ ಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ಸಿದ್ಧತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತಾಂತ್ರಿಕ ತಜ್ಞರ ಸಲಹೆ ಅನುಮತಿ ಮೂಲಕ ಪಟ್ಟಣದ ಕೆರೆಗಳಿಗೆ ಕಾಯಕಲ್ಪ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸರ್ವೆ ಕಾರ್ಯದಲ್ಲಿ ತಾಲೂಕು ಸರ್ವೆಯರ್ ರವಿ, ಸಹಾಯಕ ಸರ್ವೆಯರ್ ರಾಜಮುಡಿ, ಗ್ರಾಮಲೆಕ್ಕಿಗ ಗೌತಮ್, ಸಹಾಯಕರಾದ ವೆಂಕಟೇಶ್, ಮಂಜು ಇದ್ದರು.

ಈ ಸಂದರ್ಭ ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕುಡಾ ನಿರ್ದೇಶಕರಾದ ವಿ.ಡಿ. ಪುಂಡರೀಕಾಕ್ಷ, ಮಧುಸೂದನ್, ಪ.ಪಂ. ಸದಸ್ಯರುಗಳಾದ ಅಮೃತ್‌ರಾಜ್, ವಿ.ಎಸ್. ಆನಂದಕುಮಾರ್, ಮುಳ್ಳುಸೋಗೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್. ರಾಜೇಶ್ ಮತ್ತಿತರರು ಇದ್ದರು.