ಪಾಲಿಬೆಟ್ಟ, ಮಾ. ೧೫: ಆದಿವಾಸಿಗಳ ಮನೆ ಮೇಲೆ ನಿರಂತರ ಕಾಡಾನೆ ದಾಳಿ ಮಾಡಿ ಮನೆ ಜಖಂ ಗೊಳಿಸುವ ಮೂಲಕ ಹಾಡಿಯ ನಿವಾಸಿಗಳಿಗೆ ಆತಂಕ ಸೃಷ್ಟಿ ಮಾಡು ತ್ತಿದ್ದ ಕಾಡಾನೆ ಹಾವಳಿ ತಡೆಗೆ ಆದಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಮೂರನೇ ದಿನಕ್ಕೆ ಮುಂದುವರಿದಿದೆ.
ಕಾಡಾನೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ವೀರಾಜಪೇಟೆ ತಾಲೂಕಿನ ಚೆನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕಾಡಾನೆಗಳು ನಾಡಿಗೆ ಬರದಂತೆ ಕಾವಲು ಕಾಯುವ ಮೂಲಕ ಡ್ರಮ್ ಬಾರಿಸಿ ಶಬ್ದ ಮಾಡಿ, ಹಾಡು ಕುಣಿತದೊಂದಿಗೆ, ಚಪ್ಪಾಳೆ ತಟ್ಟಿ ಜಾಗರಣೆ ಮಾಡುವುದರೊಂದಿಗೆ ಕಾಡಾನೆ ಹಾಡಿಗೆ ಬರದ ಹಾಗೆ ತಡೆಗಟ್ಟಲು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಮಕ್ಕಳು ವೃದ್ಧರು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದಿದ್ದಾರೆ.
ಆದಿವಾಸಿಗಳ ಮುಖಂಡ ಜೆ.ಕೆ. ಅಪ್ಪಾಜಿ ಪತ್ರಿಕೆಯೊಂದಿಗೆ ಮಾತನಾಡಿ ಕಳೆದ ಹಲವು ತಿಂಗಳಿನಿAದ ನಿರಂತರವಾಗಿ ಕಾಡಾನೆ ದಾಳಿಮಾಡಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದ್ದಲ್ಲದೆ ಮನೆಯಲ್ಲಿದ್ದ ವಸ್ತುಗಳನ್ನು ತಿಂದು ತುಳಿದು, ನಾಶ ಮಾಡಿದೆ. ನಿರಂತರವಾಗಿ ಮನೆಗಳ ಮೇಲೆ ದಾಳಿ ಮಾಡುತ್ತಿರುವ ಕಾಡಾನೆಗಳ ಹಾವಳಿಯಿಂದ ಆದಿವಾಸಿಗಳು ಆತಂಕದಲ್ಲಿದ್ದಾರೆ. ಹಾಡಿ ಸುತ್ತಲೂ ಕಂದಕ ಹಾಗೂ ಸೋಲಾರ್ ಬೇಲಿ ಅಳವಡಿಸಿ ಕಾಡಾನೆಗಳ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಮೇಕೇರಿರ ಅರುಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ, ಪ್ರಮುಖರಾದ ಅಪ್ಪು ಸುಬ್ರಮಣಿ, ಮಂಜು, ಸಾಬು, ಹಾಡಿ ನಿವಾಸಿಗಳಾದ ಮಂಜುಳಾ, ಗಣೇಶ, ರಾಜು, ಮಹೇಶ ಸೇರಿದಂತೆ ಮತ್ತಿತರರು ಇದ್ದರು.
ಚಿತ್ರ, ವರದಿ: ಪುತ್ತಂ ಪ್ರದೀಪ್