ಮಡಿಕೇರಿ, ಮಾ. ೧೫: ವನ್ಯಜೀವಿ ದಾಳಿಯಿಂದ ಹಸು ಅಥವಾ ಎಮ್ಮೆ ಮೃತಪಟ್ಟರೆ ಸಂಬAಧಿಸಿದ ರೈತರಿಗೆ ಸರ್ಕಾರ ತಲಾ ರೂ. ೧ ಲಕ್ಷ ಪರಿಹಾರ ನೀಡಬೇಕೆಂದು ಎಐಸಿಸಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಿರಂತರ ಹುಲಿ ದಾಳಿಯಿಂದ ತತ್ತರಿಸಿರುವ ಕೊಡಗಿನ ಜನರಿಗೆ ಆಗಿರುವ ನಷ್ಟಕ್ಕೆ ಭಿಕ್ಷೆಯ ರೂಪದಲ್ಲಿ ಪರಿಹಾರ ನೀಡುವ ಅಗತ್ಯವಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಜೀವನೋಪಾಯ ಮತ್ತು ಹಾಲು, ಸಾವಯವ ಗೊಬ್ಬರಕ್ಕಾಗಿ ಹಸು, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇವುಗಳ ಮೇಲೂ ಹುಲಿ ದಾಳಿಯಾಗುತ್ತಿರುವುದರಿಂದ ಗ್ರಾಮಸ್ಥರು ಅಸಹಾಯಕರಾಗಿದ್ದಾರೆ. ಬ್ಯಾಂಕ್‌ಗಳಲ್ಲಿ ಸಾಲಮಾಡಿ ಹೈನುಗಾರಿಕೆಯನ್ನು ಕೈಗೊಂಡಿರುವ ಅನೇಕರು ಜಿಲ್ಲೆಯಲ್ಲಿದ್ದಾರೆ. ಇದನ್ನೇ ನಂಬಿ ಜೀವನ ಸಾಗಿಸುವ ಬಡವರು ಇದ್ದಾರೆ. ಆದರೆ ನಿರಂತರ ಹುಲಿ ದಾಳಿಯಿಂದ ಹಸು ಮತ್ತು ಎಮ್ಮೆಗಳು ಬಲಿಯಾಗುತ್ತಿದ್ದು, ಜನ ಆದಾಯದ ಮೂಲವನ್ನೆ ಕಳೆದುಕೊಳ್ಳುತ್ತಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಜಾನುವಾರುಗಳನ್ನು ಕಳೆದುಕೊಳ್ಳುವ ರೈತರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಜಾನುವಾರುಗಳಿಗೆ ಮಾಡಿದ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಾನವ ಜೀವಹಾನಿಗೆ ಪ್ರಸ್ತುತ ರೂ. ೭.೫೦ ಲಕ್ಷ ಮಾತ್ರ ಪರಿಹಾರ ನೀಡಲಾಗುತ್ತಿದ್ದು, ಈ ಮೊತ್ತವನ್ನು ರೂ. ೨೫ ಲಕ್ಷಕ್ಕೆ ಏರಿಕೆ ಮಾಡಬೇಕು ಎಂದು ಕೂಡ ಆಗ್ರಹಿಸಿದ್ದಾರೆ