ಮಡಿಕೇರಿ, ಮಾ. ೧೩: ನಗರಸಭೆ ವತಿಯಿಂದ ಉದ್ದೇಶಿಸಿರುವ ಗಣಪತಿ ಬೀದಿ ರಸ್ತೆ ಅಗಲೀಕರಣ ಕಾರ್ಯ ಆರಂಭಗೊAಡಿದ್ದು, ನಿವಾಸಿಗಳು ಸ್ವಯಂಪ್ರೇರಿತವಾಗಿ ಗುರುತಿಸಲ್ಪಟ್ಟಿರುವ ಜಾಗದಲ್ಲಿದ್ದ ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಭಾಗವನ್ನು ಕೆಡವಿ ಆದೇಶ ಪಾಲಿಸುತ್ತಿದ್ದಾರೆ. ಡ್ರಿಲಿಂಗ್‌ಯAತ್ರ, ಜೆಸಿಬಿ, ಕಾರ್ಮಿಕರನ್ನು ಬಳಸಿಕೊಂಡು ಕಟ್ಟಡ ತೆರವು ಕಾರ್ಯದಲ್ಲಿ ಮಾಲೀಕರು ತೊಡಗಿಸಿಕೊಂಡು ನಗರದ ಅಭಿವೃದ್ಧಿಗೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ನೂರಾರೂ ವರ್ಷಗಳಿಂದ ಬಾಳಿ ಬದುಕಿದ ಮನೆಯನ್ನು ಕೆಡವುವ ಸಂದರ್ಭ ಹಲವು ಮಾಲೀಕರು ಭಾವುಕರಾದರು. ಈಗಾಗಲೇ ಶೇ ೭೦ ರಷ್ಟು ನಿವಾಸಿಗಳು ನಗರಸಭೆ ನಿರ್ದೇಶನದ ಹಿನ್ನೆಲೆ ಗುರುತಿಸಿದ್ದ ಜಾಗದಲ್ಲಿರುವ ಕಟ್ಟಡದ ಕೆಲ ಭಾಗವನ್ನು ಕೆಡವಿದ್ದಾರೆ.(ಮೊದಲ ಪುಟದಿಂದ) ಬಾಕಿ ಇದ್ದವರಿಗೆ ಒಂದು ವಾರಗಳ ಕಾಲ ನಗರಸಭೆ ಕಾಲಾವಕಾಶ ನೀಡಿದ್ದು, ಅದರಂತೆ ಕಟ್ಟಡ ನೆಲಸಮ ಕಾರ್ಯಕ್ಕೆ ನಿವಾಸಿಗಳು ಮುಂದಾಗಿದ್ದಾರೆ.ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಪರಿಹರಿಸುವ ಸಲುವಾಗಿ ನಗರೋತ್ಥಾನ ೩ನೇ ಹಂತದ ಮೂಲಕ ರೂ ೧.೫೦ ಕೋಟಿ ವೆಚ್ಚದಲ್ಲಿ ೨೦೧೯ರಲ್ಲಿ ಗಣಪತಿ ಬೀದಿ ರಸ್ತೆ ಅಗಲೀಕರಣ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಇದಕ್ಕಾಗಿ ೨೮.೨.೨೦೨೦ರಲ್ಲಿ ಗಣಪತಿ ಬೀದಿಯ ೨೦೧ ಕಟ್ಟಡಗಳ ಸ್ವಲ್ಪ ಭಾಗವನ್ನು ತೆರವು ಮಾಡುವ ನಿಟ್ಟಿನಲ್ಲಿ ನಗರಸಭೆ ನೋಟಿಸ್ ಕೂಡ ಜಾರಿ ಮಾಡಿತ್ತು. ಆದೇಶದ ಹಿನ್ನೆಲೆ ಶೇ ೭೦ ರಷ್ಟು ನಿವಾಸಿಗಳು ಗುರುತಿಸಿದ್ದ ಸರಹದ್ದಿನಲ್ಲಿ ಬರುವ ಕಟ್ಟಡದ ಭಾಗವನ್ನು ನೆಲಸಮ ಮಾಡಿದ್ದರು. ಕೆಲವರು ಇಡೀ ಕಟ್ಟಡ ತೆರವುಗೊಳಿಸಿ ಸಮತಟ್ಟು ಗೊಳಿಸಿದ್ದಾರೆ. ಆದರೆ, ಮನೆ ತೆರವಿಗೆ ಕೆಲವರಿಂದ ಆಕ್ಷೇಪ ವ್ಯಕ್ತಗೊಂಡ ಹಿನ್ನೆಲೆ ಹಾಗೂ ಕೊರೊನಾ ಪರಿಸ್ಥಿತಿಯಿಂದ ಯೋಜನೆ ಆರಂಭಿಸಲು ತಡವಾಗಿತ್ತು. ಇದೀಗ ಆಡಳಿತಾತ್ಮಕ ಪ್ರಕ್ರಿಯೆ ಆರಂಭಗೊAಡಿರುವುದರಿAದ ನಗರಸಭೆಯಿಂದ ಸೂಚನೆ ನೀಡಿದ ಹಿನ್ನೆಲೆ ಕೆಡವಲು ಬಾಕಿ ಇದ್ದವರು ಕಟ್ಟಡ ತೆರವುಗೊಳಿಸುತ್ತಿದ್ದಾರೆ.

೨೦೧ ಕಟ್ಟಡ

ಉದ್ದೇಶಿತ ಯೋಜನೆಯ ರಸ್ತೆಯ ಎರಡು ಬದಿಯಲ್ಲಿ ಒಟ್ಟು ೨೦೧ ಕಟ್ಟಡಗಳಿವೆ. ಎಡಭಾಗದಲ್ಲಿ ೧೦೩, ಬಲಭಾಗದಲ್ಲಿರುವ ೯೮ ಕಟ್ಟಡಗಳ ಪೈಕಿ ಬಹುತೇಕ ಮನೆಗಳಿವೆೆ. ಈಗಾಗಲೇ ಹಲವು ಕಟ್ಟಡಗಳ ನಿಗದಿತ ಭಾಗವನ್ನು ಮಾಲೀಕರು ತೆರವು ಮಾಡಿದ್ದಾರೆ.

೧೬.೦೧.೨೦೧೯ರಲ್ಲಿ ಮಾರ್ಕಿಂಗ್ ಕಾರ್ಯಕ್ಕೆ ಕ್ರಮಕೈಗೊಳ್ಳಲಾಗಿತ್ತು. ಗುರುತಿಸಿದ್ದ ಜಾಗದ ತನಕ ಮನೆಯ ಭಾಗವನ್ನು ಕೆಡವಲು ಆದೇಶ ಮಾಡಲಾಗಿತ್ತು. ಕೆಲವರಿಂದ ಯೋಜನೆಗೆ ಆಕ್ಷೇಪಣೆ ವ್ಯಕ್ತವಾಗಿತ್ತು. ಆದರೆ, ಕಾನೂನಾತ್ಮಕವಾಗಿ ಯೋಜನೆಗೆ ಯಾವುದೇ ಅಡ್ಡಿ ಎದುರಾಗಿರಲಿಲ್ಲ. ೯ ಮೀಟರ್ ಅಗಲ ರಸ್ತೆ ಅಗಲೀಕರಣ ಕಾರ್ಯ ನಡೆಯಲಿದ್ದು, ಈಗಾಗಲೇ ಆನೇಕರು ಮನೆಗಳನ್ನು ಕೆಡವಿ ನಗರಸಭೆ ಆದೇಶಕ್ಕೆ ಸ್ಪಂದನ ನೀಡಿದ್ದಾರೆ. ಮನೆ ಕೆಡವಿದವರಿಗೆ ಹಾಗೂ ಕೆಡವುವರಿಗೆ ಯಾವುದೇ ರೀತಿಯ ಆರ್ಥಿಕ ಪರಿಹಾರ ನಗರಸಭೆಯಿಂದ ದೊರೆಯುವುದಿಲ್ಲ ಎಂದು ಪೌರಾಯುಕ್ತ ರಾಮದಾಸ್ ಮಾಹಿತಿ ನೀಡಿದ್ದಾರೆ.

ಪರಿಹಾರಕ್ಕೆ ಒತ್ತಾಯ

ಕೆಲವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸ ಮನೆಯನ್ನು ನಿರ್ಮಿಸಿದ್ದಾರೆ. ಇದೀಗ ಯೋಜನೆಯ ಪರಿಣಾಮವಾಗಿ ಮನೆಯ ಒಂದು ಭಾಗವನ್ನು ಕೆಡವುವ ಪರಿಸ್ಥಿತಿ ಬಂದಿದೆ. ಇದರಿಂದ ಇಡೀ ಕಟ್ಟಡಕ್ಕೆ ಹಾನಿಯಾಗುವ ಭಯದಲ್ಲಿ ಮಾಲೀಕರಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.