ಸೋಮವಾರಪೇಟೆ, ಮಾ. ೧೩: ಶಿವರಾತ್ರಿಯಂದು ಎಲ್ಲರೂ ದೇವರ ಧ್ಯಾನದಲ್ಲಿ ಮಗ್ನರಾಗಿದ್ದರೆ, ಹಾನಗಲ್ಲುಬಾಣೆಯಲ್ಲಿ ಕೆಲ ಪುಂಡರು ಮನೆಗಳ ಮೇಲೆ ಧಾಳಿ ನಡೆಸಿ ದಾಂಧಲೆ ಮಾಡಿದ್ದಾರೆ.
ವಾಸದ ಮನೆಗಳ ಮೇಲೆ ಕಲ್ಲು ಹೊಡೆದು, ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ತಳ್ಳಿ ಜಖಂಗೊಳಿಸುವ ಮೂಲಕ ದುಷ್ಕೃತ್ಯ ಮೆರೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಶಿವರಾತ್ರಿಯಂದು ಮನೆಮಂದಿ ದೇವಾಲಯಕ್ಕೆ ಹೋಗಿದ್ದ ಸಂದರ್ಭ ಅನಾಗರಿಕ ವರ್ತನೆ ತೋರಿರುವ ದುರುಳರು, ಹಾನಗಲ್ಲು ಬಾಣೆಯ ಚಂದ್ರ ಹಾಗೂ ಸುರೇಶ್ ಅವರ ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ತಳ್ಳಿ ಜಖಂಗೊಳಿಸಿದ್ದಾರೆ.
ಇದರೊAದಿಗೆ ದಯಾನಂದ್ ಅವರ ಮನೆಯ ಮುಂಭಾಗ ಇಟ್ಟಿದ್ದ ಹಲಗೆ, ಬೋರ್ಡ್ಗಳನ್ನು ಕದ್ದೊಯ್ದಿದ್ದಾರೆ. ವಿಜಯ ಅವರ ಮನೆಯ ಕಿಟಕಿಗೆ ಕಲ್ಲು ಹೊಡೆದು ಪುಂಡಾಟ ತೋರಿದ್ದು, ಮನೆಯ ಮುಂಭಾಗ ಇಟ್ಟಿದ್ದ ಮರದ ಹಲಗೆ, ಕಬ್ಬಿಣದ ರಾಡ್‌ಗಳನ್ನು ಕದ್ದಿದ್ದಾರೆ. ಅನಿಲ್ ಅವರ ಮನೆಯ ಮುಂಭಾಗ ನಿಲ್ಲಿಸಿದ್ದ ಸೈಕಲ್‌ನ್ನು ಕದ್ದು ಕೊಲ್ಲಿಯೊಳಗೆ ಎಸೆದು ದುರ್ವರ್ತನೆ ತೋರಿದ್ದಾರೆ.
ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದುಷ್ಕೃತ್ಯ ನಡೆಸಿರುವ ಪುಂಡರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು. ಗ್ರಾಮಕ್ಕೆ ಪೊಲೀಸ್ ಬೀಟ್ ಹೆಚ್ಚಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಪುಂಡರ ಪತ್ತೆಗೆ ಕ್ರಮವಹಿಸಿದ್ದಾರೆ.