ಮಡಿಕೇರಿ, ಮಾ. ೧೨: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಂತಿಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಭವಾನಿ ಜಿ.ಕೆ. ಅವರು ಅಧ್ಯಕ್ಷೆಯಾಗಿ, ಅಂತಿಮ ಬಿ.ಎ. (ಹೆಚ್‌ಇಪಿ) ವಿದ್ಯಾರ್ಥಿನಿ ಗ್ರೀಷ್ಮಾ ಕೆ.ಎ. ಉಪಾಧ್ಯಕ್ಷೆಯಾಗಿ ಹಾಗೂ ಕಾರ್ಯದರ್ಶಿಯಾಗಿ ಅಂತಿಮ ವಾಣಿಜ್ಯ ವಿಭಾಗದ ಶಾಹಿಲ್ ಎಂ.ಎಸ್. ಆಯ್ಕೆಯಾಗಿದ್ದಾರೆ.

ಜಂಟಿ ಕಾರ್ಯದರ್ಶಿಗಳಾಗಿ ದ್ವಿತೀಯ ಬಿಬಿಎ ವಿದ್ಯಾರ್ಥಿ ಶಾಹಿಲ್ ಎಂ.ಕೆ ಮತ್ತು ದ್ವಿತೀಯ ವಾಣಿಜ್ಯ ವಿಭಾಗದ ಪೂಜಿತಾ.ಪಿ.ಎಂ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಂತಿಮ ಬಿಎ (ಹೆಚ್‌ಇಪಿ)ಯ ಸತೀಶ್ ಹೆಚ್.ಎಸ್ ಮತ್ತು ಅಂತಿಮ ಬಿಎ (ಕೆಜೆಎಸ್) ವಿದ್ಯಾರ್ಥಿನಿ ಲೀನಾ ಕೆ.ಎಲ್. ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದಲ್ಲಿ ಸದಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳುವುದರೊಂದಿಗೆ ಇತರ ವಿದ್ಯಾರ್ಥಿಗಳಿಗೂ ಮಾದರಿಯಾಗುವಂತೆ ಕರೆ ನೀಡಿದರು. ಕಾಲೇಜಿನ ಜೀವನದಲ್ಲಿ ಬೆಳೆಸಿಕೊಳ್ಳುವ ನಾಯಕತ್ವ ಗುಣ ಭವಿಷ್ಯದಲ್ಲಿ ಸದೃಡ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ ಅವರು, ಪ್ರತಿಯೊಬ್ಬರು ತಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಿ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ ಬಿ, ವಿದ್ಯಾರ್ಥಿ ನಾಯಕರು ಕಾಲೇಜಿನ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ವಿದ್ಯಾರ್ಥಿ ಸಂಘದ ಸಲಹೆಗಾರರಾದ ಹಿಂದಿ ವಿಭಾಗದ ಸಹಪ್ರಾಧ್ಯಾಪಕರಾದ ಬಿ.ಹೆಚ್. ತಳವಾರ ಅವರು ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ವಿದ್ಯಾರ್ಥಿ ಸಂಘದ ನಿಕಟಪೂರ್ವ ಸಲಹೆಗಾರರಾದ ಡಾ. ಇ. ತಿಪ್ಪೇಸ್ವಾಮಿ, ಸಲಹಾ ಸಮಿತಿಯ ಇತರ ಸದಸ್ಯರಾದ ಡಾ. ಶ್ರೀಧರ ಹೆಗಡೆ, ರಮೇಶ್ ಹೆಚ್.ಆರ್, ಡಾ. ರೇಣುಶ್ರೀ, ಪ್ರದೀಪ್ ಬಂಢಾರಿ ಅವರು ಉಪಸ್ಥಿತರಿದ್ದರು.