ಸುಂಟಿಕೊಪ್ಪ, ಮಾ.೧೦ : ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ತೊಂಡೂರಿನಲ್ಲಿ ಸರ್ವೆ ನಂಬರ್ ೧೦೫ ರಲ್ಲಿ ಕಳೆದ ೫೦ ವರ್ಷದಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಪಂಗಡದ ವ್ಯಕ್ತಿಯೋರ್ವರು ರೂಢಿಸಿಕೊಂಡ ಜಾಗದಲ್ಲಿ ಗ್ರಾಮ ಪಂಚಾಯಿತಿಯವರು ಕಸ ವಿಲೇವಾರಿಗೆ ನಿರ್ಮಿಸಿ ಕಂಬ ನೆಟ್ಟಿರುವುದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಜೇನು ಕುರುಬರ ಲಿಂಗ ಹಾಗೂ ಪುಟ್ಟಿ ಕಳೆದ ೫೦ ವರ್ಷಗಳಿಂದ ತೊಂಡೂರಿನ ೧೦೫ ರ ಸರ್ವೆ ನಂಬರ್‌ನ ೫೦ ಸೆಂಟು ಜಾಗದಲ್ಲಿ ಪುಟ್ಟ ಮನೆಯನ್ನು ನಿರ್ಮಿಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅನಂತರ ಅವರ ಮಗ ಪುಟ್ಟರಾಜು ಅವರು ಕೃಷಿ ಮಾಡಿಕೊಂಡಿದ್ದರು. ಅನಕ್ಷರಸ್ಥರಾದ ಇವರುಗಳಿಗೆ ಜಾಗದ ದಾಖಲಾತಿ ಮಾಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

೭ನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಸದಸ್ಯರುಗಳ ಪೊಲೀಸರ ಸಹಕರದೊಂದಿಗೆ ಈ ೫೦ ಸೆಂಟು ಜಾಗದಲ್ಲಿ ಕಸವಿಲೇವಾರಿಗೆ ಏಕಾಏಕಿ ಬಂದು ಬೇಲಿ ನಿರ್ಮಿಸಿ ಬಂದೋಬಸ್ತ್ ಮಾಡಿರುವುದು ಸರಿಯಲ್ಲ. ಇಲ್ಲಿ ಕಸವಿಲೇವಾರಿಗೆ ಗ್ರಾಮಸ್ಥರ ವಿರೋಧವಿದೆ ಎಂದು ಸಂತೋಷ್, ಸುಜಿತ್,ವಿನೋದ್, ರೇಖಾ,ಸದಾನಂದ, ದೇವಕ್ಕಿ, ಗಣೇಶ,ಸುರೇಶ್ ತಿಳಿಸಿದ್ದಾರೆ.

ಅನಂತರ ಗ್ರಾ.ಪಂ. ಅಧ್ಯಕ್ಷ ರಮೇಶ ಮಾತನಾಡಿ ಜಿಲ್ಲಾಧಿಕಾರಿಯವರ ಆದೇಶದಂತೆ ಕಸವಿಲೇವಾರಿ ಜಾಗ ಗುರುತಿಸಿದ್ದೇವೆ. ಗ್ರಾಮಸ್ಥರ ವಿರೋಧವಿರುವುದರಿಂದ ಇಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲಾಗುವುದಿಲ್ಲ ಎಂದು ಭರವಸೆ ನೀಡಿದರು.