ಕೂಡಿಗೆ, ಮಾ. ೧೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಭುವನಗಿರಿ, ಹುಣಸೆಪಾರೆ ಗ್ರಾಮಗಳಿಗೆ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿಯಿಂದಾಗಿ ಬಾರಿ ತೊಂದರೆಗಳು ಆಗುತ್ತಿವೆ ಎಂಬದರ ಬಗ್ಗೆ ಅಲ್ಲಿನ ಗ್ರಾಮಸ್ಥರು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಲಿಖಿತವಾಗಿ ದೂರು ನೀಡಿದರು.
ಸೀಗೆಹೊಸೂರು ಗ್ರಾಮವು ಜೇನುಕಲ್ಲು ಬೆಟ್ಟಕ್ಕೆ ಹೊಂದಿಕೊAಡAತೆ ಇರುವ ಗ್ರಾಮವಾಗಿದೆ. ಇದರ ಸುತ್ತಲೂ ಅರಣ್ಯ ಇಲಾಖೆಯವರು ಕಾಡಾನೆಗಳು ಬರದ ಹಾಗೆ ಕಂದಕಗಳನ್ನು ತೋಡಿದ್ದಾರೆ. ಕೆಲವು ಕಡೆಗಳಲ್ಲಿ ಬೃಹತ್ ಕಲ್ಲುಗಳು ಇವೆ ಎಂಬ ನೆಪದಲ್ಲಿ ಕಂದಕವನ್ನು ತೆಗೆಯದೆ ಬಿಟ್ಟಿರುವ ಜಾಗದಲ್ಲಿ ಬಾಣವಾರ ಅರಣ್ಯ ಪ್ರದೇಶದ ಅಂಚಿನ ಕಾಡಾನೆಗಳು ಈ ಭಾಗದಲ್ಲಿ ದಾಳಿ ಮಾಡಿ ಬಾರಿ ನಷ್ಟಪಡಿಸುತ್ತಿವೆ. ಅಲ್ಲದೆ ಸಂಜೆ ಸಮಯದಲ್ಲಿ ಸಾರ್ವಜನಿಕರು ತಿರುಗಾಡಲೂ ಭಯಭೀತರಾಗಿರುತ್ತಾರೆ ಎಂದು ಈ ಭಾಗದ ನೂರಾರು ರೈತರು ಶಾಸಕ ಗಮನಕ್ಕೆ ತಂದರು. ನಂತರ ಶಾಸಕರು ಕಾಡಾನೆಗಳಿಂದ ಬೆಳೆ ಹಾನಿಯಾದ ಗದ್ದೆಗಳನ್ನು ವೀಕ್ಷಣೆ ಮಾಡಿದರು.
ದೂರವಾಣಿ ಮೂಲಕ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಯೊಂದಿಗೆ ಮಾತನಾಡಿ, ಸ್ಥಳ ಪರಿಶೀಲನೆ ನಡೆಸಿ ತಕ್ಷಣವೇ ಕಲ್ಲುಗಳನ್ನು ಒಡೆದು ಕಂದಕಗಳನ್ನು ತೋಡುವಂತೆ ಸೂಚನೆ ನೀಡಿದರು. ಅದರಂತೆ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ಬೃಹತ್ ಪ್ರಮಾಣದ ಕಲ್ಲುಗಳನ್ನು ತೆಗೆಯುಲು ಕಾರ್ಯೋನ್ಮುಖರಾಗಿದ್ದಾರೆ.
ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಕೆ.ಟಿ. ಗಿರೀಶ್ ಸೇರಿದಂತೆ ಸ್ಥಳೀಯ ರೈತ ಪ್ರಮುಖರಾದ ಶಿವಣ್ಣ, ದಿನೇಶ್, ಪಾಪಣ್ಣ, ನಾಗರಾಜ್, ಕುಮಾರ್, ರಾಮಣ್ಣ, ಗಿರಿಯಪ್ಪ ಸೇರಿದಂತೆ ನೂರಾರು ರೈತರು ಹಾಜರಿದ್ದರು.
-ಕೆ.ಕೆ. ನಾಗರಾಜಶೆಟ್ಟಿ