ಸಿದ್ದಾಪುರ, ಮಾ. ೧೦: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಟ್ಟಳ್ಳಿ ಭಾಗದ ವಿಧವೆ ಮಹಿಳೆಯೋರ್ವರು ಮನೆ ಇಲ್ಲದೇ ತಮ್ಮ ತಂದೆಯ ಜಾಗದಲ್ಲಿ ಮರವೊಂದರ ಕೆಳಗೆ ವಾಸವಾಗಿದ್ದರು. ಅಲ್ಲದೇ ಈ ಮಹಿಳೆಯು ತನ್ನ ಸಮಸ್ಯೆಯನ್ನು ಜಾಲತಾಣಗಳ ಮುಖಾಂತರ ಪ್ರಚಾರ ಮಾಡಿದ್ದರು. ಈ ಹಿನ್ನೆಲೆ ಮಹಿಳೆಯ ಸಮಸ್ಯೆಗೆ ಸ್ಪಂದಿಸಿದ ಮಾಲ್ದಾರೆಯ ಜನಪರ ಯುವಕ ಸಂಘವು ಸುನೀತಾ ಅವರಿಗೆ ಅವರ ತಂದೆಯ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ನಂತರ ಈ ಮಹಿಳೆಯು ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವAತೆ ಯುವಕ ಸಂಘದ ಮುಖಾಂತರ ಕಂದಾಯ ಇಲಾಖಾಧಿಕಾರಿಗಳ ಗಮನ ಸೆಳೆದರು. ಈ ಹಿನ್ನೆಲೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಪಿ.ಡಿ.ಓ. ರಾಜನ್, ವಿ.ಎ. ಮುತ್ತಪ್ಪ ಭೇಟಿ ನೀಡಿದರು. ತಹಶೀಲ್ದಾರ್ ಯೋಗಾನಂದ ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯವನ್ನು ವಿಧವೆ ಸುನೀತಾ ಅವರಿಗೆ ಕಲ್ಪಿಸಿಕೊಡಲಾಗುವುದೆಂದು ಹಾಗೂ ಜಾಗದ ದಾಖಲಾತಿಗಳನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದರು. ಈ ಸಂದರ್ಭ ಜನಪರ ಸಂಘದ ಅಧ್ಯಕ್ಷ ಕುಟ್ಟಪ್ಪಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.