ಮಡಿಕೇರಿ, ಮಾ.೧೦: ಕೊಡಗು ಜಿಲ್ಲೆಯ ಜಮ್ಮಾ ಬಾಣೆಯ ಪಹಣಿಯಲ್ಲಿರುವ ಕುಟುಂಬದ ಮುಖ್ಯಸ್ಥರ(ಪಟ್ಟೆದಾರರ) ಹೆಸರು ತೆಗೆದುಹಾಕಲು ಜಾರಿಯಲ್ಲಿರುವ ಪ್ರಕ್ರಿಯೆ ಯಾವುದು, ಪೌತಿ ಖಾತೆ ಆಂದೋಲನದಲ್ಲಿ ಈ ಪ್ರಕ್ರಿಯೆಯನ್ನು ಸೇರಿಸಲಾಗಿದೆಯೇ ಎಂದು ವಿಧಾನ ಪರಿಷತ್ತು ಸದಸ್ಯೆ ವೀಣಾ ಅಚ್ಚಯ್ಯ ಅವರು ಕಂದಾಯ ಸಚಿವರಾದ ಆರ್.ಅಶೋಕ್ ಅವರಿಂದ ಮಾಹಿತಿ ಪಡೆದಿದ್ದಾರೆ.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್.ಅಶೋಕ ಅವರು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೧೨೮ ಮತ್ತು ೧೨೯ ರ ವಿವರಣೆಯಂತೆ ಜಮ್ಮಾ ಬಾಣೆಯ ಕಂದಾಯಕ್ಕೆ ಒಳಪಟ್ಟಂತಹ ಪಹಣಿಯಲ್ಲಿರುವ ಕುಟುಂಬದ ಮುಖ್ಯಸ್ಥ (ಖಾತೆದಾರರ/ ಪಟ್ಟೆದಾರರ) ಹೆಸರು ತೆಗೆದು ಅವರ ವಾರಸುದಾರರಿಗೆ ಖಾತೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ಪೌತಿಖಾತೆ ಆಂದೋಲನ ನಡೆಸಿ ಮೃತ ಖಾತೆದಾರರ (ಪಟ್ಟೆದಾರರ) ಹೆಸರು ವಜಾಗೊಳಿಸಿ ಅವರ ವಾರಸುದಾರರಿಗೆ ಖಾತೆ ಬದಲಾವಣೆ ಬಗ್ಗೆ ಕ್ರಮವಹಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಸಚಿವರು ಕುಟುಂಬದ ಮುಖ್ಯಸ್ಥ (ಪಟ್ಟೆದಾರರು) ಪೌತಿಯಾದಲ್ಲಿ ಪಟ್ಟೆದಾರರ ವಾರಸುದಾರರ (ಕಲಂ ೯ರಲ್ಲಿ ಮುಖ್ಯ ಸ್ವಾಧೀನದಾರರೊಂದಿಗೆ ಜಂಟಿಯಾಗಿದ್ದಲ್ಲಿ) ಹೆಸರಿಗೆ ಪೌತಿ ಖಾತೆ ಮಾಡಲು ಪೌತಿ ಖಾತೆ ಆಂದೋಲನ ಪ್ರಕ್ರಿಯೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ ಹೇಳಿದ್ದಾರೆ.