ಕೊಡ್ಲಿಪೇಟೆ, ಮಾ. ೧೦: ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಸೂಚನೆಯಂತೆ ಇಲ್ಲಿನ ನಾಡಕಚೇರಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು.

ಹೋಬಳಿ ಉಪ ತಹಶಿಲ್ದಾರ್ ಪುರುಷೋತ್ತಮ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಂಧ್ಯಾ ಸುರಕ್ಷಾ ಸೇರಿದಂತೆ ಇನ್ನಿತರ ಪಿಂಚಣಿ ಯೋಜನೆಗಳ ೨೦ ಮಂದಿ ಫಲಾನುಭವಿಗಳಿಗೆ ಆದೇಶ ಪ್ರತಿ ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಉಪ ತಹಶೀಲ್ದಾರ್ ಪುರುಷೋತ್ತಮ್, ವಿವಿಧ ಪಿಂಚಣಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ನೂತನ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳೇ ಮನೆಗೆ ಬಂದು ಮಾಹಿತಿ ಸಂಗ್ರಹಿಸಿ, ಪಿಂಚಣಿ ಒದಗಿಸಿಕೊಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಂದಾಯ ಪರಿವೀಕ್ಷಕ ಮನುಕುಮಾರ್ ಮಾತನಾಡಿ, ಅರ್ಹ ಫಲಾನುಭವಿಗಳು ಮಾತ್ರ ಪಿಂಚಣಿ ಪಡೆಯಬೇಕು. ಸರ್ಕಾರದ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಈ ಸಂದರ್ಭ ಗ್ರಾಮ ಲೆಕ್ಕಾಧಿಕಾರಿ ಚೈತ್ರ, ಪ್ರಕೃತಿ, ಶ್ವೇತಾಶ್ರೀ, ಗ್ರಾಮ ಸಹಾಯಕರಾದ ರಾಜು, ಮಹೇಶ್, ಲೋಹಿತ್, ಸಿಬ್ಬಂದಿ ಶಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.