ಚೆಟ್ಟಳ್ಳಿ, ಮಾ. ೧೦: ಚೌಡೇಶ್ವರಿ ಅಮ್ಮತ್ತಿ ತಂಡವು ರೋಚಕ ಗೆಲುವನ್ನು ಸಾಧಿಸುವ ಮೂಲಕ ಕೆಕೆಎಫ್‌ಸಿ ೨೦೨೧ರ ಕಪ್ ತಮ್ಮದಾಗಿಸಿಕೊಂಡಿದೆ.
ಚೆಟ್ಟಳ್ಳಿಯ ಕೆಕೆಎಫ್‌ಸಿ ವತಿಯಿಂದ ೮ನೇ ವರ್ಷದ ೯+೩ ಆಟಗಾರರ ಕಾಲ್ಚೆಂಡು ಪಂದ್ಯಾಟವು ಚೆಟ್ಟಳ್ಳಿ ಪೌಢಶಾಲಾ ಮೈದಾನದಲ್ಲಿ ತಾ. ೪ ರಿಂದ ತಾ. ೭ರ ವರೆಗೆ ನಡೆಯಿತು. ಈ ಪಂದ್ಯಾಟದಲ್ಲಿ ೨೧ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟವು ಕೂರ್ಗ್ ಶೂಟರ್ ಲಿಗೆಹಾಗೂ ಚೌಡೇಶ್ವರಿ ಅಮ್ಮತ್ತಿ ನಡುವೆ ನಡೆಯಿತು. ಈ ಪಂದ್ಯಾಟದಲ್ಲಿ ಚೌಡೇಶ್ವರಿ ಅಮ್ಮತ್ತಿ ೩-೧ ಗೋಲ್‌ಗಳಿಂದ ಪಂದ್ಯಾಟ ಜಯಗಳಿಸಿದರು. ಕೂರ್ಗ್ ಶೂಟರ್ ದ್ವಿತೀಯ ವಿಜಯನಗರ ಎಫ್‌ಸಿ ತೃತೀಯ, ಮಿಲನ್ಸ್ ಅಮ್ಮತ್ತಿ ನಾಲ್ಕನೇ ಸ್ಥಾನ ಪಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ತೇಲಪಂಡ ಶಿವಕುಮಾರ್ ನಾಣಯ್ಯ ಚೆಂಡು ಒದೆಯುವ ಮೂಲಕ ಫೈನಲ್ ಪಂದ್ಯಾಟವನ್ನು ಉದ್ಘಾಟಿಸಿದರು. ಕೋವಿಡ್‌ನಂತಹ ಕಷ್ಟಕರ ಸಮಯದಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಇಂತಹ ಕ್ರೀಡೆಯನ್ನು ಆಯೋಜಿಸಿರುವ ಕೆಕೆಎಫ್‌ಸಿ ತಂಡದ ಕಾರ್ಯಕ್ಕೆ ಶ್ಲಾಘಿಸಿದರು. ಹಾಕಿ, ಕ್ರಿಕೆಟ್ ನಂತಹ ಹಲವು ಕ್ರೀಡೆಗಳು ಕೊಡಗಿನ ಮೂಲೆಮೂಲೆಗಳಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯವೆಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತ ಮಂಜುನಾಥ್ ಮಾತನಾಡಿ, ಕೆಕೆಎಫ್‌ಸಿ ಸಂಘಟನೆ ಕ್ರೀಡೆ ಮಾತ್ರವಲ್ಲದೆ ಹಲವು ಸಾಮಾಜಿಕ ಕಾರ್ಯವನ್ನು ಆಯೋಜಿಸುತ್ತಿರುವ ಜೊತೆಗೆ ಸತತ ೫ ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸಿರು ವುದು ಹೆಮ್ಮೆಯ ವಿಷಯವೆಂದರು. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ, ಕೆಕೆಎಫ್‌ಸಿಯ ಗೌರವ ಅಧ್ಯಕ್ಷ ರೈಮಂಡ್ ಸೆರವೊ, ಕೆಕೆಎಫ್‌ಸಿ ಅಧ್ಯಕ್ಷ ಮಹಮ್ಮದ್ ರಫೀಕ್, ಪಿ.ರ್. ಮಂಜುನಾಥ್, ಚೆಟ್ಟಳ್ಳಿ ಉಪ ಠಾಣೆಯ ಎಎಸ್‌ಐ ಪಿ.ಟಿ. ಶ್ರೀನಿವಾಸ್ ಹಾಗೂ ಇನ್ನಿತರ ದಾನಿಗಳು ಹಾಜರಿದ್ದರು.
ಖಜಾಂಚಿ ಲೂಯಿಸ್ ಸ್ವಾಗತಿಸಿ, ಕ್ರೀಡಾ ಮೇಲ್ವಿಚಾರಕÀ ವಿನು ವಂದಿಸಿ, ಕಾರ್ಯದರ್ಶಿ ಲತೀಫ್ ನಿರೂಪಿಸಿದರು. ೨೦೧೯-೨೦ನೇ ಸಾಲಿನಲ್ಲಿ ೧೦ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಸನ್ಮಾನಿಸಲಾಯಿತು.