ಕುಶಾಲನಗರ, ಮಾ. ೧೦: ಕುಶಾಲನಗರ ಪಟ್ಟಣ ಪಂಚಾಯಿತಿ ೨೦೨೦-೨೧ರ ಬಜೆಟ್ ಪೂರ್ವಸಿದ್ಧತಾ ಸಭೆ ಪಂಚಾಯಿತಿ ಅಧ್ಯಕ್ಷ ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ೨೧-೨೨ರ ಸಾಲಿನ ಅಂದಾಜು ಆಯವ್ಯಯ ಬಗ್ಗೆ ಚರ್ಚಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಕುಶಾಲನಗರ ಪಟ್ಟಣದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಪ್ರಮುಖವಾಗಿ ಪಂಚಾಯಿತಿಗೆ ಲಭಿಸುತ್ತಿರುವ ವಿವಿಧ ಆದಾಯ ಮೂಲಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿAದ ಮಾಹಿತಿ ಪಡೆದುಕೊಂಡರು. ಕಳೆದ ಬಜೆಟ್ ನಿರೀಕ್ಷೆಗಳು ಮತ್ತು ಮುಂಬರುವ ಬಜೆಟ್ ರೂಪುರೇಷಗಳ ಬಗ್ಗೆ ಚರ್ಚೆ ನಡೆಯಿತು. ಪಟ್ಟಣ ವ್ಯಾಪ್ತಿಯ ಪಂಚಾಯಿತಿ ಆಸ್ತಿಗಳನ್ನು ಪಂಚಾಯಿತಿ ಸುರ್ಪದಿಗೆ ತೆಗೆದು ಕೊಳ್ಳುವುದು ಸೇರಿದಂತೆ ನೆನೆಗುದಿಗೆ ಬಿದ್ದಿರುವ ಕಟ್ಟಡಗಳನ್ನು ಅಭಿವೃದಿ ್ಧಪಡಿಸುವ ಬಗ್ಗೆ ಚರ್ಚೆ ನಡೆಯಿತು.

ಈ ಬಗ್ಗೆ ಮಾಹಿತಿ ನೀಡಿದ ಪಪಂ ಅಧ್ಯಕ್ಷ ಜೈವರ್ಧನ್, ಕುಶಾಲನಗರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಚಿಂತನೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಪೈಕಿ ಪ್ರಮುಖವಾಗಿ ಮೈಸೂರು ರಸ್ತೆಯಲ್ಲಿರುವ ಹಳೆಯ ಚಲನಚಿತ್ರ ಮಂದಿರವನ್ನು ಸಾರ್ವಜನಿಕ ಕಲ್ಯಾಣ ಮಂಟಪವಾಗಿ ರೂಪಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾವೇರಿ ಬಡಾವಣೆಯ ಮಳಿಗೆಗಳ ಅಭಿವೃದ್ಧಿ ಸೇರಿದಂತೆ ಪಟ್ಟಣದಲ್ಲಿ ಶವಸಂಸ್ಕಾರ ಕಾರ್ಯಕ್ಕೆ ಅನುಕೂಲವಾಗಲು ಶಾಂತಿ ವಾಹನ ಕಲ್ಪಿಸುವ ವ್ಯವಸ್ಥೆ, ಜೀವನದಿ ಕಾವೇರಿ ಸ್ವಚ್ಛತೆಗೆ ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ಸೇರಿದಂತೆ ಸ್ಥಗಿತಗೊಂಡಿದ್ದ ಪಪಂ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿ ಕೆಲವೇ ದಿನಗಳಲ್ಲಿ ಪುನರಾರಂಭಗೊಳಿಸಲಾಗುವುದು ಎಂದು ತಿಳಿಸಿದರು.

ಪಪಂ ಉಪಾಧ್ಯಕ್ಷೆ ಸುರಯ್ಯಭಾನು ಈ ಸಂದರ್ಭ ಮಾತನಾಡಿ, ಕುಶಾಲನಗರದ ದಂಡಿನಪೇಟೆಯ ಶಾಂತಿಮಾರ್ಗ, ಟೌನ್ ಕಾಲನಿ ಮತ್ತು ಕಾಳಮ್ಮ ಕಾಲನಿಗಳಲ್ಲಿ ನೂತನ ಅಂಗನವಾಡಿ ಕಟ್ಟಡಗಳನ್ನು ಶಾಸಕರ ಅನುದಾನದಡಿ ನಿರ್ಮಿಸಲಾಗುವುದು. ದಂಡಿನಪೇಟೆ ಬಳಿ ಅಪೂರ್ಣ ಗೊಂಡಿರುವ ಸೋಪಾನಕಟ್ಟೆ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು, ಕುಶಾಲನಗರ ಪಟ್ಟಣದ ವ್ಯಾಪ್ತಿಯಲ್ಲಿ ನದಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.