ಶ್ರೀಮಂಗಲ, ಮಾ. ೮: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾ.ಪಂ.ನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಕಳೆದುಕೊಂಡ ಇಟ್ಟೀರ ರವಿ ಪೂವಯ್ಯ ಮತ್ತು ಹುಲಿ ದಾಳಿಯಿಂದ ಬಾಚೀರ ಸುಜಾ ಉತ್ತಯ್ಯ ಅವರ ಹಸುವಿಗೆ ಗಂಭೀರ ಗಾಯವಾಗಿದ್ದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ಭೇಟಿ ಮಾಡಲಾಯಿತು.

ಹುಲಿ ದಾಳಿಯಿಂದ ಹಸು ಕಳೆದುಕೊಂಡಿರುವ ರೈತರಿಗೆ ಹಸುವಿನ ಮಹಜರು ಮಾಡಿ ಮೌಲ್ಯ ಮಾಪನ ಮಾಡುವ ಪಶುವೈದ್ಯಾಧಿಕಾರಿಗಳು ನಮೂದಿಸುವ ಮೌಲ್ಯವನ್ನು ಅರಣ್ಯ ಇಲಾಖೆ ಪರಿಹಾರವಾಗಿ ನೀಡಬೇಕು. ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಹಸುಗಳನ್ನು ಸಾಕಿ ತಮ್ಮ ಜೀವನೋಪಾಯಕ್ಕೆ ಆದಾಯಗಳಿಸುತ್ತಿದ್ದು, ಹುಲಿ ದಾಳಿಯಿಂದ ಹಸುಗಳನ್ನು ರಕ್ಷಿಸಿಕೊಳ್ಳಲು ಸರಕಾರ ಸುರಕ್ಷಿತ ಕೊಟ್ಟಿಗೆಗಳನ್ನು ನಿರ್ಮಿಸಲು ಉಚಿತ ಅನುದಾನವನ್ನು ನೀಡಬೇಕು. ಈ ಬಗ್ಗೆ ಅರಣ್ಯ ಸಚಿವರಿಗೆ ಸಮಿತಿಯಿಂದ ಪತ್ರ ಬರೆಯುವುದಾಗಿ ಸಮಿತಿಯ ಗೌರವಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಈ ಸಂದರ್ಭ ಹೇಳಿದರು.

ನಿರಂತರವಾಗಿ ಹುಲಿ ದಾಳಿ ಮಾಡುತ್ತಿದ್ದು ಇಬ್ಬರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಹಸುಗಳು ಬಲಿಯಾಗುತ್ತಿವೆ. ಆದರೂ ಕಳೆದ ಹಲವು ದಿನಗಳಿಂದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಸೆರೆಯಾಗಿಲ್ಲ. ಹುಲಿ ಸೆರೆ ಕಾರ್ಯಾಚರಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹುಲಿ ಪೀಡಿತ ಪ್ರದೇಶಕ್ಕೆ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರು ಆಗಮಿಸಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಅರಣ್ಯ ಇಲಾಖೆ ಪರಿಹಾರವಾಗಿ ನೀಡುವ ಚೆಕ್‌ನ್ನು ಕಟ್ಟಿ ಮಂದಯ್ಯ ಅವರು ಸಂತ್ರಸ್ತ ರೈತ ಸುಜಾ ಉತ್ತಯ್ಯ ಅವರಿಗೆ ವಿತರಿಸಿದರು. ಈ ಸಂದರ್ಭ ತಿತಿಮತಿ ವನ್ಯಜೀವಿ ವಿಭಾಗದ ಎಸಿಎಫ್ ಪಂದ್ಯAಡ ಉತ್ತಪ್ಪ, ಹಿತರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಬಾಚಿರ ಕಾರ್ಯಪ್ಪ, ಸಹಕಾರ್ಯದರ್ಶಿ ಕಾಳೀಮಾಡ ಬೆಳ್ಯಪ್ಪ, ಸಲಹೆಗಾರರಾದ ಚೊಟ್ಟೆಯಾಂಡಮಾಡ ವಿಶ್ವನಾಥ್, ಸದಸ್ಯರಾದ ಮಲ್ಲಮಾಡ ರಂಜಿ, ಅಜ್ಜಮಾಡ ನಂಜಪ್ಪ ಹಾಜರಿದ್ದರು.