ಕಣಿವೆ, ಮಾ. ೮: ಬಡತನದ ರೇಖೆಗಿಂತ ಕೆಳಗಿರುವ ಅದರಲ್ಲೂ ಕಡು ಬಡತನದ ಬೇಗುದಿಯಲ್ಲಿ ಬೇಯುತ್ತಿರುವ ನೈಜ ಫಲಾನುಭವಿಗಳಿಗೆ ದೊರಕಬೇಕಾದ ಸರ್ಕಾರದ ಮಹತ್ವಾಕಾಂಕ್ಷೆಯ ಪಡಿತರ ಚೀಟಿಗಳು ಸ್ಥಿತಿವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡು ಸರ್ಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಅಪಾರ ದೂರುಗಳಿವೆ.

ದಶಕಗಳ ಹಿಂದಿನಿAದಲೂ ಆಹಾರ ಇಲಾಖೆಯ ಕೆಲವು ಅಧಿಕಾರಿಗಳು ಸ್ಥಿತಿವಂತರಿಗೆ ಹೆಚ್ಚು ಪಡಿತರ ಚೀಟಿಗಳನ್ನು ವಿತರಿಸಿರುವ ಕುರಿತು ದೂರುಗಳಿವೆ. ಇನ್ನೊಂದೆಡೆ ಕೆಲವು ಸರ್ಕಾರಿ ನೌಕರರು ಹಾಗೂ ಅಪಾರ ಪ್ರಮಾಣದ ಭೂಮಿಯನ್ನುಳ್ಳ ಹಲವು ಭೂ ಮಾಲೀಕರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಹೊಂದಿಕೊAಡಿರುವ ಬಗ್ಗೆಯೂ ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಂತಹ ಕಾರ್ಡುದಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಬಿಪಿಎಲ್ ಕಾರ್ಡುಗಳನ್ನು ಇಲಾಖೆಗೆ ಗೌರವಯುತವಾಗಿ ಹಿಂದಿರುಗಿಸಲು ಗಡುವನ್ನು ಕೂಡ ಕೊಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ೧.೪೧ ಲಕ್ಷ ಪಡಿತರದಾರರು ಇದ್ದಾರೆ. ಈ ಪೈಕಿ ೧೦,೧೧೦ ಮಂದಿ ಅಂತ್ಯೋದಯ ಕಾರ್ಡುದಾರರಿದ್ದು, ೩೧,೬೬೮ ಮಂದಿ ಎಪಿಎಲ್ ಕಾರ್ಡುದಾರರು ಇದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ೪೩,೬೨೭ ಬಿಪಿಎಲ್ ಕಾರ್ಡುದಾರರು ಹಾಗೂ ೩.೧೨೧ ಅಂತ್ಯೋದಯ ಕಾರ್ಡುದಾರರು, ವೀರಾಜಪೇಟೆ ತಾಲೂಕಿನಲ್ಲಿ ೩೩,೧೨೪ ಬಿಪಿಎಲ್ ಕಾರ್ಡುದಾರರು, ೫,೦೩೬ ಮಂದಿ ಅಂತ್ಯೋದಯ ಫಲಾನುಭವಿಗಳು, ಮಡಿಕೇರಿ ತಾಲೂಕಿನಲ್ಲಿ ೨೩,೧೭೩ ಬಿಪಿಎಲ್ ಕಾರ್ಡುದಾರರು, ೨,೦೫೩ ಅಂತ್ಯೋದಯ ಕಾರ್ಡುದಾರರಿದ್ದಾರೆ.

ಕಳೆದ ಒಂದು ವರ್ಷದಿಂದ ಈವರೆಗೆ ೧,೨೧೭ ಕಾರ್ಡುಗಳನ್ನು ಪತ್ತೆ ಹಚ್ಚಿ ಹಿಂಪಡೆಯಲಾಗಿದ್ದು, ತಪ್ಪಿತಸ್ತರಿಂದ ಈವರೆಗೆ ರೂ. ೪೨,೦೦೦ ದಂಡ ವಿಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಗೌರವ್‌ಕುಮಾರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಪ್ರತೀ ತಿಂಗಳು ೧೮,೮೭೨.೫೫ ಕ್ವಿಂಟಾಲ್ ಅಕ್ಕಿ, ೨೦೦೧.೫೪ ಕ್ವಿಂಟಾಲ್ ಗೋಧಿಯನ್ನು ವಿತರಿಸಲಾಗುತ್ತಿದೆ. ಹಾಗೆಯೇ ಎಪಿಎಲ್ ಕಾರ್ಡುದಾರರಿಗೆ ೧೯೭೩.೨೪ ಕ್ವಿಂಟಾಲ್ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ೧.೩೧ ಕೋಟಿ ಒಟ್ಟು ಕುಟುಂಬಗಳಿದ್ದು, ೧.೨೮ ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಹೊಂದಿವೆ. ಅಂದರೆ ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ಮನಬಂದAತೆ ಹಂಚಿಕೆ ಮಾಡಲಾಗಿದೆ.

ಆಹಾರ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಅಕ್ರಮವಾಗಿ ಬಿಪಿಎಲ್ ಕಾರ್ಡುಗಳನ್ನು ಹೊಂದಿರುವವರನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ಅತೀ ಶೀಘ್ರವೇ ಆಗಬೇಕಿದೆ. ಏಕೆಂದರೆ ಬಡವರಿಗಾಗಿ ಬರುವ ಯೋಜನೆಗಳು ಹಾಗೂ ಲಾಭಗಳು ನೈಜ ಬಡವರಿಗೆ ತಲುಪಬೇಕಿದೆ. ಏಕೆಂದರೆ ಕಳೆದ ಹತ್ತು ವರ್ಷಗಳಿಂದ ನೈಜ ಬಡವರಿಗಿದ್ದ ಸವಲತ್ತುಗಳನ್ನು ಹರಿದು ಹಂಚಿ ತಿಂದಿರುವ ಹಾಗೂ ತಿನ್ನುತ್ತಲೇ ಇರುವವರನ್ನು ಈಗಿನ ಆಧಾರ್ ಹಾಗೂ ಪಾನ್ ಕಾರ್ಡುಗಳ ಮಾದರಿಗಳಿಂದ ಪತ್ತೆ ಹಚ್ಚುವುದು ಕಷ್ಟವೇನಲ್ಲ.

ಸರ್ಕಾರದ ಕೆಲವು ಅಧಿಕಾರಿಗಳು ಮಾಡಿರುವ ಇಂತಹ ಎಡವಟ್ಟು ಮರುಕಳಿಸದಂತೆ ಸಚಿವ ಕತ್ತಿ ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ ಅಷ್ಟೆ. ಏಕೆಂದರೆ ಇದುವರೆಗೂ ಆಗಿರುವ ಬಿಪಿಎಲ್ ಕಾರ್ಡುಗಳ ಹಂಚಿಕೆಯ ಮಾನದಂಡ ವೈಫಲ್ಯವನ್ನು ಸರಿಪಡಿಸಬೇಕಿದೆ. - ಕೆ.ಎಸ್. ಮೂರ್ತಿ