
ಗೋಣಿಕೊಪ್ಪಲು, ಮಾ. ೯: ಓರ್ವ ಬಾಲಕನನ್ನು ಕೊಂದು ಮತ್ತೋರ್ವ ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದ ಹುಲಿಯನ್ನು ಸೆರೆ ಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸದ್ಯದ ಮಟ್ಟಿಗೆ ವಿಫಲರಾಗಿದ್ದಾರೆ. ಹುಲಿಯನ್ನು ಹಿಡಿಯುವ ಪ್ರಯತ್ನದಲ್ಲಿ ವಿಫಲರಾಗಿರುವುದನ್ನು ಖಂಡಿಸಿ ರೈತ ಸಂಘದ ಮುಂದಾಳತ್ವದಲ್ಲಿ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಅಹೋರಾತ್ರಿ ಚಳವಳಿ ನಡೆಸುವ ಮೂಲಕ ಇಲಾಖಾಧಿಕಾರಿಗಳ ಮೇಲೆ ಮತ್ತಷ್ಟು ಒತ್ತಡ ಹೇರಿದ್ದಾರೆ. ಬೆಳ್ಳೂರು ಗ್ರಾಮದ ಜಂಕ್ಷನ್ನಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಹಲವು ಸುತ್ತಿನ ಸಭೆಗಳು ನಡೆಯುತ್ತಿದ್ದು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ತಯಾರಿ ನಡೆಯುತ್ತಿವೆ. ಈ ನಡುವೆ ವನ್ಯಜೀವಿ ತಜ್ಞರೊಬ್ಬರ ನೇತೃತ್ವದಲ್ಲಿ ಹುಲಿ ಸೆರೆ ಕಾರ್ಯಾಚರಣೆ ಮುಂದುವರೆದಿದೆ.
ಇತ್ತ ಹುದಿಕೇರಿ ಹೋಬಳಿಯ ಬೆಳ್ಳೂರು ಗ್ರಾಮದಲ್ಲಿ ಸೋಮವಾರ ಮುಂಜಾನೆ ೭ ಗಂಟೆಗೆ ಕಾಫಿ ತೋಟದಲ್ಲಿರುವ ಸ್ಪಿçಂಕ್ಲರ್ ಜೆಟ್ಅನ್ನು ಬದಲಾಯಿಸುವ ವೇಳೆ ದಿಢೀರನೆ ಎದುರಾದ ಹುಲಿಯೊಂದು ಕಾರ್ಮಿಕ ಕೆಂಚಶೆಟ್ಟಿ (೪೫) ಎಂಬುವನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿ ತೆರಳಿತ್ತು. ನಂತರ ಆತನ ಪತ್ನಿ ಗೌರಮ್ಮ ಸ್ಥಳಕ್ಕೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಗಂಭೀರ ಗಾಯಗಳಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾರ್ಮಿಕ ಕೆಂಚಶೆಟ್ಟಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಇಲ್ಲಿಯ ವೈದ್ಯರಾದ
ಡಾ. ಗ್ರೀಷ್ಮರವರು ಗಂಭೀರ ಸ್ವರೂಪದ ಗಾಯಗಳಾಗಿರುವುದರಿಂದ ಕೆಂಚಶೆಟ್ಟಿಯನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದರು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದ ಕೆಂಚಶೆಟ್ಟಿಗೆ ಅಲ್ಲಿನ ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕೆಂಚಶೆಟ್ಟಿಯ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊAಡಿದೆ. ವೈದ್ಯರು ಈ ಬಗ್ಗೆ ವಿವಿಧ ಹಂತದಲ್ಲಿ ಚಿಕಿತ್ಸೆಯನ್ನು ಮುಂದುವರೆಸುತ್ತಿದ್ದಾರೆ. ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಮೂರು ಮಂದಿಯ ಜೀವ ಕಳೆದುಕೊಂಡAತಾಗಿದೆ. ಈ ಹಿಂದೆ ಕುಮಟೂರು ಬಳಿ ಯುವಕ ಹಾಗೂ ಟಿ. ಶೆಟ್ಟಿಗೇರಿ ಬಳಿ ವಯೋವೃದ್ಧ ಮಹಿಳೆ ಹುಲಿಯ ಬಾಯಿಗೆ ಆಹಾರವಾಗಿದ್ದಳು. ಸೋಮವಾರ ಮುಂಜಾನೆ ಬೆಳ್ಳೂರು ಬಳಿ ೮ ವರ್ಷದ ಯುವಕ ಹುಲಿಯ ದಾಳಿಯಿಂದ ಮೃತಪಟ್ಟಿದ್ದನ್ನು ಸ್ಮರಿಸಬಹುದಾಗಿದೆ.
ಮನುಷ್ಯನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕುತ್ತಿರುವುದು ಇಂದಿಗೆ ಕೊನೆಯಾಗಬೇಕು. ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಹುಲಿಯನ್ನು ಕೊಂದು ತಂದು ಸಾರ್ವಜನಿಕರ ಮುಂದೆ ಇಡಬೇಕೆಂದು ಆಗ್ರಹಿಸಿ ಅಹೋರಾತ್ರಿ ಚಳುವಳಿಯನ್ನು ಬೇಗೂರು ಮುಖ್ಯರಸ್ತೆಯ ಜಂಕ್ಷನ್ ಬಳಿಯಲ್ಲಿ ಶಾಮಿಯಾನ, ಕುರ್ಚಿಗಳನ್ನಿಟ್ಟು ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಗೆ ಅಕ್ಕಪಕ್ಕದ ಗ್ರಾಮಸ್ಥರು ಸಂಘ ಸಂಸ್ಥೆಯ ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಭಾಗವಹಿಸಿ ಹುಲಿಯನ್ನು ಕೊಲ್ಲಲೇಬೇಕೆಂದು ಒತ್ತಾಯ ಪಡಿಸಿದರು.
ಬೆಳ್ಳೂರು ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಅನತಿ ದೂರದ ಅರಣ್ಯ ಪ್ರದೇಶ, ಕಾಫಿ ತೋಟ ಹಾಗೂ ಇತರೆಡೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಬೆಂಗಳೂರಿನಿAದ ಆಗಮಿಸಿದ ಶಾರ್ಪ್ ಶೂರ್ಸ್ಗಳು, ಸಾಕಾನೆಯ ಸಹಕಾರದಿಂದ ಹುಲಿಯ ಪತ್ತೆಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಸಿಸಿಎಫ್ ಹೀರಾಲಾಲ್, ಡಿಎಫ್ಓ ಚಕ್ರಪಾಣಿ ವೀರೇಂದ್ರ ಹಾಗೂ ಇತರ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಯೇ ಮೊಖಾಂ ಹೂಡಿದ್ದು ಹುಲಿ ಸೆರೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ವನ್ಯಜೀವಿ ತಜ್ಞ ಜಿ. ಸುಶೀಲ್ ಆಗಮಿಸಿದ್ದು, ಕಾರ್ಯಾಚರಣೆಯ ನೇತೃತ್ವ ವಹಿಸಲಿದ್ದಾರೆ.
ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲು ಸಾವಿರಾರು ಸಂಖ್ಯೆಯಲ್ಲಿ ರೈತರು ಸಾರ್ವಜನಿಕರು, ಕಾರ್ಮಿಕರು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸುವ ಬಗ್ಗೆ ಹಾಗೂ ಈ ಮೂಲಕ ಸರ್ಕಾರಕ್ಕೆ ಕಠಿಣ ಸಂದೇಶ ನೀಡುವ ಬಗ್ಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುಕೋ ಸಂಘಟನೆಯ ಜಿಲ್ಲಾಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, (ಮೊದಲ ಪುಟದಿಂದ) ಕೊಡವ ಸಮಾಜ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾಂಗ್ರೆಸ್ ಮುಖಂಡರಾದ ಕದ್ದಣಿಯಂಡ ಹರೀಶ್ ಬೋಪಣ್ಣ, ಬೆಳೆಗಾರ ಒಕ್ಕೂಟದ ಪ್ರಮುಖರಾದ ಮಾಣಿರ ವಿಜಯ ನಂಜಪ್ಪ, ರೈತ ಸಂಘದ ಮುಖಂಡರಾದ ಪುಚ್ಚಿಮಾಡ ಅಶೋಕ್, ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಮಚ್ಚಮಾಡ ಅನೀಶ್ ಮಾದಪ್ಪ, ರೈತ ಸಂಘದ ಕಾನೂನು ಸಲಹೆಗಾರ ವಕೀಲರಾದ ಹೇಮಚಂದ್ರ ಸೇರಿದಂತೆ ಇನ್ನಿತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಂತಿಮವಾಗಿ ರೈತ ಸಂಘದ ನೇತೃತ್ವದಲ್ಲಿ ಹೋರಾಟವನ್ನು ಬಿಗಿಗೊಳಿಸುವ ತೀರ್ಮಾನಕ್ಕೆ ಬರಲಾಯಿತು.
ಸ್ಥಳದಲ್ಲಿ ಡಿವೈಎಸ್ಪಿ ಜಯಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ, ರಾಮರೆಡ್ಡಿ, ಶ್ರೀಧರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಮೊಖಂ ಹೂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕಾರ್ಯ ನೆರವೇರಿಸಿದರು. ಮಚ್ಚಮಾಡ ಅನೀಶ್ ಮಾದಪ್ಪ, ಮಾಣೀರ ವಿಜಯ್ ನಂಜಪ್ಪ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ,ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಚೊಟ್ಟೆಕಾಳಪಂಡ ಮನು, ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ಪುಚ್ಚಿಮಾಡ ಸುನೀಲ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುಕ್ಕಾಟೀರ ಶಿವು ಮಾದಪ್ಪ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮುಖಂಡರಾದ ಚೆಕ್ಕೆರ ವಾಸು ಕುಟ್ಟಪ್ಪ, ಪ್ರಮುಖರಾದ ಕಳ್ಳಿಚಂಡ ರಾಬಿನ್,ಪುಚ್ಚಿಮಾಡ ಬಿದ್ದಪ್ಪ, ಅಜ್ಜಮಾಡ ಚಿಮ್ಮ ತಿಮ್ಮಯ್ಯ, ಕರ್ತಮಾಡ ವಿವೇಕ್, ಸೇರಿದಂತೆ ರೈತ ಸಂಘದ ಮುಖಂಡರು ಸೇರಿದಂತೆ ಇನ್ನಿತರರು ಹಾಜರಿದ್ದರು.