ಗೋಣಿಕೊಪ್ಪಲು, ಮಾ. ೮: ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ತಳ ಮಟ್ಟದಿಂದ ಗಟ್ಟಿಗೊಳಿಸುವ ಮೂಲಕ ಮುಂದೆ ಬರುವ ದಿನಗಳಲ್ಲಿ ಅಧಿಕಾರವನ್ನು ಹಿಡಿಯಲು ಶ್ರಮ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಕೆ. ಮಂಜುನಾಥ್ ಪದಾಧಿಕಾರಿಗಳಿಗೆ ಕರೆ ನೀಡಿದರು.

ಪೊನ್ನಂಪೇಟೆಯ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ತಾರಕಕ್ಕೆ ತಲುಪಿದೆ ಎಂದು ಆರೋಪಿಸಿದರು.

ನಿರಂತರ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಪಕ್ಷದಿಂದ ದೂರ ಉಳಿದಿರುವವರನ್ನು ಪಕ್ಷಕ್ಕೆ ಮರಳಿ ಕರೆತರಬೇಕಾಗಿದೆ. ಪಕ್ಷದ ಸ್ಥಳೀಯ ನಾಯಕರು ಸಂಪನ್ಮೂಲ ಕ್ರೋಢೀಕರಿಸಿ ಪಕ್ಷವನ್ನು ಗಟ್ಟಿಗೊಳಿಸುವಂತೆ ಕರೆ ನೀಡಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮೀದೇರಿರ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ನಾಯಕರುಗಳಾದ ತೀತಿರ ಧರ್ಮಜ ಉತ್ತಪ್ಪ, ಪೆಮ್ಮಂಡ ಪೊನ್ನಪ್ಪ, ಆಲೀರ ಎರ್ಮು ಹಾಜಿ, ಪಲ್ವಿನ್ ಪೂಣಚ್ಚ, ಅಪ್ಪಚಂಗಡ ಮೋಟಯ್ಯ, ಪಿ.ಆರ್. ಪಂಕಜ, ಉದಯ ಸೇರಿದಂತೆ ಅನೇಕರು ಪಕ್ಷ ಸಂಘಟನೆ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಮಾತನಾಡಿ ಪಕ್ಷದ ಕಾರ್ಯಕರ್ತರನ್ನು ಮತ್ತೆ ಮುಂಚೂಣಿಗೆ ತರುವ ಕೆಲಸವಾಗಬೇಕು, ಕಾರ್ಯಕರ್ತರ ಕಷ್ಟದಲ್ಲಿ ಭಾಗಿಗಳಾಗಬೇಕು ಎಂದರು. ಸಭೆಯಲ್ಲಿ ಮೂಕಳೇರ ಸುಮಿತ ಗಣೇಶ್, ಕಾರ್ಯದರ್ಶಿ ಎ.ಜೆ. ಬಾಬು ಉಪಸ್ಥಿತರಿದ್ದರು.

ಜಿಲ್ಲಾ ವಕ್ತಾರರಾದ ಕೇಚಮಾಡ ಸರಿತಾ ಪೂಣಚ್ಚ, ಜಿ.ಪಂ. ಸದಸ್ಯರಾದ ಪಿ.ಆರ್. ಪಂಕಜ, ಶ್ರೀಜಾ, ತಾ.ಪಂ. ಸದಸ್ಯರಾದ ಮೂಕಳೇರ ಆಶಾ, ಸೇರಿದಂತೆ ಮುಖಂಡರಾದ ತೆರೆಸಾ ವಿಕ್ಟರ್, ಗೋಪಾಲಕೃಷ್ಣ, ಕಡೇಮಾಡ ಕುಸುಮ, ಆಲೀರ ರಶೀದ್, ಅಬ್ದುಲ್ ರೆಹಮಾನ್, ಮಂಜುಳಾ, ಶಾಜಿ ಅಚ್ಚುತ್ತನ್ ಮುಂತಾದವರು ಉಪಸ್ಥಿತರಿದ್ದರು.

ಬೇಗೂರು ಭಾಗದ ಜಿಲ್ಲಾ ಕಾಂಗ್ರೆಸ್‌ನ ಮುಖಂಡರಾದ ರಶೀದ್ ಪಂಚಾಯತಿ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಇವರ ಮೇಲೆ ಕ್ರಮಕೈಗೊಳ್ಳಬೇಕು, ಪಕ್ಷದಿಂದ ಇವರನ್ನು ಉಚ್ಚಾಟನೆ ಮಾಡುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಮಂಜುನಾಥ್ ಸಭೆಗೆ ಭರವಸೆ ನೀಡಿದರು.