ಮಡಿಕೇರಿ, ಮಾ. ೯: ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಮತ್ತು ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಏಪ್ರಿಲ್ ೧೦ ರಂದು ಅಮ್ಮತ್ತಿಯಲ್ಲಿ ಕೊಡಗು ಫುಟ್ಬಾಲ್ ಲೀಗ್ ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಸಂಚಾಲಕ ಎಂ.ಎA. ಲೀಜೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ ೧೦, ೧೧ ಹಾಗೂ ೧೭, ೧೮ ಮತ್ತು ೨೩, ೨೪, ೨೫ ರಂದು ಅಮ್ಮತ್ತಿಯ ಪ್ರೌಢಶಾಲೆ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ಏ೧೦ ರಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಡಗು ಫುಟ್ಬಾಲ್ ಅಸೋಸಿಯೇಷನ್‌ನಲ್ಲಿ ನೋಂದಾಯಿತ ಕೊಡಗಿನ ೧೬ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಮ್ಮತ್ತಿಯ ಮಿಲನ್ಸ್ ಯೂತ್ ಕ್ಲಬ್, ಬಿ.ವೈ.ಸಿ ಹಾಲುಗುಂದ, ನೇತಾಜಿ ಯುವಕ ಸಂಘ, ವೈಷ್ಣವಿ ಎಫ್.ಸಿ, ಯಂಗ್ ಇಂಡಿಯಾ ಎಫ್.ಸಿ, ಶೈನಿಂಗ್ ಬರ್ಡ್ಸ್ ಎಫ್‌ಸಿ, ಎಕ್ಸ್ ಫೇರ್ಡ್ ಎಫ್‌ಸಿ, ಐಎನ್‌ಎಸ್ ಎಫ್‌ಸಿ, ಕುಶಾಲ್ ಎಫ್‌ಸಿ, ಯುನಿವರ್ಸೆಲ್ ಎಫ್.ಸಿ, ಅಮಿಟಿ ಎಫ್.ಸಿ, ಸಹಾರಾ ಎಫ್.ಸಿ, ಹಳ್ಳಿಗಟ್ಟು ಎಫ್.ಸಿ, ರೋಜಾರಿಯನ್ ಎಫ್.ಸಿ, ಕಾಪಿಟನ್ಸ್ ಇಲವೆನ್ ಎಫ್‌ಸಿ, ಚೌಡೇಶ್ವರಿ ಎಫ್‌ಸಿ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಮಾಹಿತಿ ನೀಡಿದರು.
ಏ೨೫ ರಂದು ಮಹಿಳೆಯರ ಪ್ರದರ್ಶನ ಪಂದ್ಯಾವಳಿ ನಡೆಯಲಿದ್ದು, ಸಂಜೆ ೩ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎ.ಹ್ಯಾರಿಸ್, ಕಾರ್ಯದರ್ಶಿ ಸತ್ಯನಾರಾಯಣ, ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಇಂಡಿಯನ್ ಫುಟ್ಬಾಲ್ ಮಾಜಿ ನಾಯಕ ಐ.ಎನ್.ವಿಜಯನ್ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಾದ ಕೆ.ವಿ. ದ್ಯಾನೇಶ್, ಹೆಂಡ್ರಿ, ಅಣ್ಣಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪಂದ್ಯಾವಳಿಗೆ ಮೂರು ಸಾವಿರ ಜನ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ವಿಜೇತ ತಂಡಕ್ಕೆ ರೂ ೨೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ೧೫ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ೯೬೮೬೮೩೧೦೫೫, ೯೮೮೦೪೧೫೬೬೦ ಸಂಪರ್ಕಿಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಂದ್ಯಾವಳಿ ಮುಖ್ಯಸ್ಥ ಸಿ.ಎ.ಮುಸ್ತಫ, ಕಾರ್ಯದರ್ಶಿ ಎಂ.ಎA.ವಿನು, ಖಜಾಂಚಿ ಪಿ.ಪಿ.ಜಾನ್ಸನ್ ಉಪಸ್ಥಿತರಿದ್ದರು.