ಮಡಿಕೇರಿ, ಮಾ. ೯: ಅರಣ್ಯ ಇಲಾಖೆ ಧೋರಣೆಯಿಂದ ಹಾಡಿಯ ಮಕ್ಕಳು ಅಂಗನವಾಡಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮವಹಿಸಬೇಕೆಂದು ಮೇಲ್ಮನೆಯಲ್ಲಿ ಶೂನ್ಯವೇಳೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಒತ್ತಾಯಿಸಿದರು.
ತಿತಿಮತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರೆಕಂಡಿ, ಆಯಿರಸುಳಿ, ಜಂಗಲ್ ಹಾಡಿ, ಬಾಳುಮನೆ, ಕಾನೂರು ಗ್ರಾ.ಪಂ ವ್ಯಾಪ್ತಿಯ ಗೋಣಿಗದ್ದೆ, ಬೊಮ್ಮಡು, ಕೊಡಂಗೆ ಮತ್ತು ನಾಗರಹೊಳೆ ಹಾಡಿಯ ಮಕ್ಕಳು ಅರಣ್ಯ ಇಲಾಖೆ ಧೋರಣೆಯಿಂದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ೮ ಹಾಡಿಗಳಲ್ಲಿ ೨೦೦ಕ್ಕೂ ಹೆಚ್ಚು ಮಕ್ಕಳಿದ್ದು, ಸ್ಥಳೀಯ ಗ್ರಾ.ಪಂ ಅಂಗನವಾಡಿಗಾಗಿ ಜೋಪಡಿಯನ್ನು ನಿರ್ಮಿಸಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನರೇಗಾ ಯೋಜನೆ ಮೂಲಕ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ತಲಾ ರೂ. ೮ ಲಕ್ಷ ಅನುದಾನ ನೀಡಿವೆ. ನೀಲಿ ನಕ್ಷೆ ಕೂಡ ತಯಾರಿಸಿ ಅರಣ್ಯ ಇಲಾಖೆ ಅನುಮತಿ ಕೋರಿ ಹಲವು ತಿಂಗಳು ಕಳೆದರೂ ಅರಣ್ಯ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಆನೆಚೌಕೂರು ವನ್ಯಜೀವಿ ವಲಯದ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಹಾಡಿಗಳಿದ್ದು, ಹೀಗಾಗಿ ಕಟ್ಟಡ ನಿರ್ಮಾಣ, ಕುಡಿಯುವ ನೀರಿನ ಯೋಜನೆ, ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರ ಈ ಹಾಡಿಗಳ ಜನರಿಗೆ ಹಕ್ಕುಪತ್ರ ನೀಡಿದೆ. ಸರಕಾರದ ಮೂಲಭೂತ ಸೌಕರ್ಯ ಹೊಂದಲು ಹಾಡಿ ಜನರು ಅರ್ಹರಾಗಿದ್ದಾರೆ. ಈ ಹಿನ್ನೆಲೆ ಅರಣ್ಯ ಇಲಾಖೆ ಕಠಿಣ ನೀತಿ ನಿಲ್ಲಿಸಿ ಜನರಿಗೆ ಮೂಲಭೂತ ಸೌಕರ್ಯ ನೀಡಲು ಮುಂದಾಗುವAತೆ ಸುನಿಲ್ ಸುಬ್ರಮಣಿ ಸಭಾಪತಿ ಬಳಿ ಮನವಿ ಮಾಡಿದ್ದಾರೆ.
ಪಾರ್ಕ್ ಸ್ಥಿತಿಗತಿ ಬಗ್ಗೆ ಪ್ರಶ್ನೆ
ಮಡಿಕೇರಿ ನಗರದ ಉದ್ಯಾನವನದ ಸ್ಥಿತಿಗತಿಯ ಬಗ್ಗೆ ಸುನಿಲ್ ಸುಬ್ರಮಣಿ ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಮಡಿಕೇರಿಯಲ್ಲಿ ೧೫ ಪಾರ್ಕ್ಗಳಿವೆ. ಇದು ನಿರ್ವಹಣೆ ಕೊರತೆ ಎದುರಿಸುತ್ತಿರುವ ಬಗ್ಗೆ ಸರಕಾರದ ಗಮನಕ್ಕೆ ಬಂದಿಲ್ಲ. ಮಡಿಕೇರಿ ನಗರಸಭೆ ೨೦೧೫-೧೬ನೇ ಸಾಲಿನಿಂದ ೨೦೧೯-೨೦ನೇ ಸಾಲಿನ ತನಕ ೧೪ನೇ ಹಣಕಾಸು ಆಯೋಗ ಅನುದಾನದಡಿ ೨೦೨೦-೨೧ನೇ ಸಾಲಿನಲ್ಲಿ ಹಂಚಿಕೆಯಾದ ಒಟ್ಟು ಮೊತ್ತದ ಶೇ ೫೦ ರಷ್ಟರ ಮುಕ್ತ ಅನುದಾನದಡಿ ರೂ ೨೦ ಲಕ್ಷ ಉದ್ಯಾನವನ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವಂತ ಸಂಪನ್ಮೂಲಗಳಿAದ ಉದ್ಯಾನವನಗಳನ್ನು ನಿರ್ವಹಣೆ ಮಾಡಬೇಕು. ಉದ್ಯಾನ ನಿರ್ವಹಣೆಗೆ ಪ್ರತ್ಯೇಕವಾಗಿ ಸರಕಾರದಿಂದ ಅನುದಾನ ನಿಗದಿಪಡಿಸಿಲ್ಲ ಎಂದು ಮಾಹಿತಿ ನೀಡಿದರು.