ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು, ಮಾ. ೬: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದ ಆರು ಸಚಿವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ. ಮಾರ್ಚ್ ೩೦ರವರೆಗೆ ಮಾನಹಾನಿಕರ ಸುದ್ದಿಗಳ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಸಿಟಿ ಸಿವಿಲ್ ಕೋರ್ಟ್ ಶನಿವಾರ ಆದೇಶಿಸಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದ ನಂತರ, ಇನ್ನೂ ಹಲವು ಸಚಿವರಿಗೆ ಸಂಬAಧಿಸಿದ ಮಾನಹಾನಿಕರ ಸುದ್ದಿ ಪ್ರಸಾರವಾಗುವ ಭೀತಿಯಿಂದ, ಅಂತಹ ಸುದ್ದಿ ಪ್ರಸಾರವಾಗುವ ಮೊದಲೇ ನಿರ್ಬಂಧ ವಿಧಿಸುವಂತೆ ಕೋರಿ ಆರು ಸಚಿವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನ ಸಿಸಿಹೆಚ್-೨೦ರ ನ್ಯಾಯಾಧೀಶ ಬಿ.ಎಸ್.ವಿಜಯಕುಮಾರ್ ಅವರು ಅರ್ಜಿಯನ್ನು ಮಾನ್ಯಮಾಡಿ, ಆರು ಸಚಿವರ ಬಗ್ಗೆ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿ, ಮಾಧ್ಯಮಗಳಿಗೆ ತುರ್ತು ನೋಟೀಸ್ ಜಾರಿಗೊಳಿಸಿದ್ದಾರೆ. ಅರ್ಜಿಯ ಮುಂದಿನ ವಿಚಾರಣೆ ಮಾರ್ಚ್ ೩೦ಕ್ಕೆ ಮುಂದೂಡಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಬಿ.ಸಿ. ಪಾಟೀಲ್, ಸಹಕಾರ ಹೆಚ್.ಟಿ. ಸೋಮಶೇಖರ್, ಕ್ರೀಡಾ ಸಚಿವ ನಾರಾಯಣಗೌಡ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ನಗರಾಭಿವೃದ್ಧಿ ಭೈರತಿ ಬಸವರಾಜ್ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಮೋದಿ ಫೋಟೋ ಹಾಕಬೇಡಿ: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

ನವದೆಹಲಿ, ಮಾ. ೬: ಮುಂಬರುವ ದಿನಗಳಲ್ಲಿ ಚುನಾವಣೆಯಿರುವ ಪಂಚ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೊರೊನಾ ವೈರಸ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳನ್ನು ಪ್ರಕಟಿಸಬಾರದೆಂದು ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋಗಳನ್ನು ತೆಗೆದುಹಾಕಬೇಕೆಂದು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಕಳೆದ ಮಂಗಳವಾರ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಕೋವಿನ್ ಪ್ಲಾಟ್‌ಫಾರ್ಮ್ನಲ್ಲಿ ತಯಾರಾಗುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಫೋಟೋ ಹಾಕುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದAತಾಗುತ್ತದೆ ಎಂದು ಅದು ಆರೋಪಿಸಿತ್ತು.

ಸೋಮವಾರದಿಂದ ೩ ಸಾವಿರ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ: ಸುಧಾಕರ್

ಬೆಂಗಳೂರು, ಮಾ. ೬: ತಾ. ೮ ರಿಂದ ಪಿಎಚ್‌ಸಿ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿ ಸುಮಾರು ೩ ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಪ್ರತಿ ದಿನ ಒಂದರಿAದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಕೋವಿಡ್ ನಿಯಂತ್ರಣ ಸಂಬAಧ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಚರ್ಚಿಸಲಾಗಿದೆ. ತಾ. ೮ ರಿಂದ ೩ ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಲಸಿಕೆ ಪಡೆಯಬೇಕು ಎಂದರು. ಕೇರಳ, ಮಹಾರಾಷ್ಟçದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವುದರಿಂದ ಸವಾಲು ಎದುರಾಗಿದೆ. ಇನ್ನು ಮುಂದೆ ನಿಗಾ ಇರಿಸುವುದರೊಂದಿಗೆ ಗುಂಪು ಸೇರುವುದನ್ನು ಕಡಿಮೆ ಮಾಡಬೇಕಿದೆ. ಸಭೆ ಸಮಾರಂಭ, ಹೋರಾಟಗಳಲ್ಲಿ ಒಂದು ತಿಂಗಳಾದರೂ ಹೆಚ್ಚು ಜನ ಸೇರದಂತೆ ಮಾಡಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಮದುವೆ ಇನ್ನಿತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ೫೦೦ ಕ್ಕಿಂತ ಹೆಚ್ಚು ಜನರಿರಬಾರದು. ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೀಡಿಯೋ ಸಂವಾದ ನಡೆಸಿ ಸೂಚನೆ ನೀಡಲಿದ್ದಾರೆ. ಮಂಗಳೂರಿಗೆ ಹೊರಗಿನಿಂದ ಹೆಚ್ಚಿನವರು ಬರುವುದರಿಂದ ಅಲ್ಲಿ ಹೆಚ್ಚು ತಪಾಸಣೆ ಮಾಡಬೇಕೆಂದು ಸೂಚಿಸಲಾಗಿದೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಉಡುಪಿ, ಕೊಡಗು, ಬೆಳಗಾವಿ, ತುಮಕೂರು ಜಿಲ್ಲೆಗಳು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ ಎಂದರು.