ಮಡಿಕೇರಿ ಮಾ. ೬: ಬಿಜೆಪಿ ವೃತ್ತಿಪರ ಪ್ರಕೋಷ್ಠದ ವತಿಯಿಂದ ತಾ. ೭ ರಂದು ನಗರದಲ್ಲಿ ಉಚಿತ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ. ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ‘ಹಿಯರಿಂಗ್ ಕೇರ್ ಫಾರ್ ಆಲ್’ ಎಂಬ ಘೋಷ ವಾಕ್ಯದೊಂದಿಗೆ ಅಮೃತ ಇಎನ್ಟಿ ಮತ್ತು ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ಸಹಯೋಗದಲ್ಲಿ ೩ನೇ ವರ್ಷದ ಉಚಿತ ಶ್ರವಣ ಪರೀಕ್ಷಾ ಕಾರ್ಯಕ್ರಮ ಹಾಗೂ ಉಚಿತ ಕಿವಿ ಆರೋಗ್ಯ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇದರಲ್ಲಿ ಆಯ್ಕೆಯಾದ ಏಳು ಫಲಾನುಭವಿಗಳಿಗೆ ಬಿಜೆಪಿ ವೃತ್ತಿಪರ ಪ್ರಕೋಷ್ಠದಿಂದ ಉತ್ತಮ ಗುಣಮಟ್ಟದ ಉಚಿತ ಶ್ರವಣ ಯಂತ್ರ ವಿತರಿಸಲಾಗುವುದೆಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲಾ ಬಿಜೆಪಿ ವೃತ್ತಿಪರ ಪ್ರಕೋಷ್ಠದಿಂದ ಮಾ. ೧೨ ಮತ್ತು ೧೩ ರಂದು ಉಚಿತ ಕೃತಕ ಕಾಲು ಜೋಡಣೆ ಹಾಗೂ ಉಚಿತ ಮಧುಮೇಹ ಶಿಬಿರ ನಡೆಯಲಿದೆ ಎಂದು ಮೋಹನ್ ಅಪ್ಪಾಜಿ ಮಾಹಿತಿ ನೀಡಿದರು. ನಗರದ ಕಾಫಿ ಕೃಪಾ ಕಟ್ಟಡದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಿಬಿರ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಮನೋಜ್ ಮಂದಪ್ಪ ಇದ್ದರು.