ಶನಿವಾರಸಂತೆ, ಮಾ. ೫: ನಿಡ್ತ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಗ್ರಾಮದ ನಿವಾಸಿ ಕೆ.ಎ. ನಾಣಯ್ಯ ಅವರ ಮನೆಯ ಹಿಂಬಾಗಿಲು ಮುರಿದು, ನುಗ್ಗಿ ಗಾಡ್ರೆಜ್ ಬೀರುವಿನಲ್ಲಿದ್ದ ರೂ. ೧ ಲಕ್ಷ ಕಳುವು ಮಾಡಿರುವ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾ. ೪ ರಂದು ಬೆಳಿಗ್ಗೆ ನಾಣಯ್ಯ ಹಾಗೂ ಪತ್ನಿ ಕೂಲಿ ಕೆಲಸಕ್ಕೆ ಹೋಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳು ಮನೆಗೆ ಬೀಗ ಹಾಕಿಕೊಂಡು ಕಾಲೇಜಿಗೆ ಹೋಗಿ ಸಂಜೆ ಕಾಲೇಜಿನಿಂದ ಬಂದ ಮಗಳು ಪೂರ್ಣಿಮ ಮನೆಯ ಒಳಗಡೆ ಹೋಗಿ ನೋಡಲಾಗಿ, ಹಿಂಬಾಗಿಲು ತೆರೆದಿದ್ದು, ಗಾಡ್ರೇಜ್ ಬೀರುವಿನಲ್ಲಿದ್ದ ಬಟ್ಟೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ತಂದೆಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾಳೆ.

ತಕ್ಷಣ ತಂದೆ ನಾಣಯ್ಯ ಬಂದು ನೋಡಲಾಗಿ ಕಳ್ಳರು ಹಿಂಬಾಗಿಲ ಮೂಲಕ ಒಳನುಗ್ಗಿ ಗಾಡ್ರೇಜ್ ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿ ತೆರೆದು ಬಟ್ಟೆಯಲ್ಲಿ ಸುತ್ತಿಟ್ಟಿದ್ದ ರೂ. ೧ ಲಕ್ಷ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವದು ಗೋಚರಿಸಿದೆ. ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣಾಧಿಕಾರಿ ಹೆಚ್.ಇ. ದೇವರಾಜು ಕಲಂ ೪೫೪, ೩೮೦ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತಾರೆ. ವೃತ್ತ ನಿರೀಕ್ಷಕ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ.