ಭಾಗಮಂಡಲ, ಮಾ. ೫: ಭಾಗಮಂಡಲ ಹೋಬಳಿಯ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ. ೬ ರಿಂದ (ಇಂದಿನಿAದ) ತಾ. ೮ ರವರೆಗೆ ನಡೆಯಲಿದ್ದು, ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದಾರೆ. ಮೂರು ದಿನಗಳ ಕಾಲ ನಡೆಯುವ ವಿಶಿಷ್ಟ ‘ಚಿನ್ನತಪ್ಪ’ ಹಬ್ಬದಲ್ಲಿ ಶ್ರೀಕೃಷ್ಣನದು ಎನ್ನಲಾದ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸುವುದೇ ‘ಚಿನ್ನತಪ್ಪ’ ಹಬ್ಬದ ವಿಶೇಷತೆಯಾಗಿದೆ.
ತಾ. ೬ ರಂದು (ಇಂದು) ಬೆಳಗ್ಗಿನ ಹಬ್ಬದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದ್ದು, ಭಾನುವಾರ ಪಟ್ಟಣಿ ಹಬ್ಬ ಜರುಗಲಿದೆ. ತಾ. ೮ ರಂದು ಉತ್ಸವ ಕೊನೆಗೊಳ್ಳಲಿದೆ. ಅಯ್ಯಂಗೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಚಿನ್ನತಪ್ಪ’ ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ. ಗೊಲ್ಲ ಜನಾಂಗದವರು ಹಾಗೂ ಊರಿನ ಇತರ ಜನಾಂಗದವರು ಒಗ್ಗೂಡಿ ನಡೆಸುವ ಈ ಹಬ್ಬ ಪ್ರತಿವರ್ಷ ಬೇಸಿಗೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯದೊAದಿಗೆ ನೆರವೇರುತ್ತದೆ.
ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವನಿಗೆ ಶ್ರೀಕೃಷ್ಣ ಪರಮಾತ್ಮ ಧರಿಸುವ ಆಭರಣ ತೊಡಿಸುವರು. ಎತ್ತು ಪೋರಾಟದ ಎತ್ತುಗಳನ್ನು ಗದ್ದೆಯಲ್ಲೇ ಮೂರು ಸುತ್ತು ಓಡಿಸುತ್ತಾರೆ. ಬಿಳಿ ಸೀರೆ ಉಟ್ಟ ಹದಿನಾರು ಕುಟುಂಬದ ಮಹಿಳೆಯರು ಚೆಂಬುಚೆರ್ಕ್ ಒಪ್ಪಿಸುವ ಪದ್ಧತಿ ಇದೆ. ಇಲ್ಲಿ ಗೊಲ್ಲ ಜನಾಂಗದವರೇ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಪ್ರತಿವರ್ಷ ಬೆಳಗ್ಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ, ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ, ಬೆಳಗಿನ ಜಾವ ಎರಡು ಗಂಟೆಯವರೆಗೆ ಜರುಗುತ್ತದೆ. ಮರುದಿನ ಜರುಗುವ ಪಟ್ಟಣಿ ಹಬ್ಬವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತರು ಬಂದು ಸೇರುತ್ತಾರೆ. ಊರ ಮಂದ್‌ನಲ್ಲಿ ಅಶ್ವತ್ಥ ವೃಕ್ಷದ ಕೆಳಗೆ ಶ್ರೀಕೃಷ್ಣನನ್ನು ಪೂಜಿಸುವುದರೊಂದಿಗೆ ವಿಶೇಷ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಕೆಲವು ಹಿರಿಯರ ಪ್ರಕಾರ ಶ್ರೀಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಆ ಊರವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರAತೆ. ಹಬ್ಬದ ದಿನ ಎತ್ತು ಪೋರಾಟ ನಡೆಯುತ್ತದೆ. ಉತ್ಸವದಂದು ಆಕಾಶದಲ್ಲಿ ಅಪರೂಪಕ್ಕೆ ಗರುಡ ಕಾಣಿಸಿಕೊಳ್ಳುತ್ತದೆ. ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಆದಿನ ಒಂದೊAದು ಕುಟುಂಬದಿAದ ಒಬ್ಬರು ಮಹಿಳೆ ಶ್ವೇತ ವಸ್ತç ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾಳೆ. ಸಂಜೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕುತ್ತಾರೆ. - ಸುನಿಲ್ ಕುಯ್ಯಮುಡಿ