ಮಡಿಕೇರಿ, ಮಾ. ೩: ‘ತೋಳ ಬಂತು ತೋಳ...’ ಮಕ್ಕಳ ಕತೆ ಎಲ್ಲರಿಗೂ ಗೊತ್ತಿರಬಹುದಲ್ಲವೇ...? ಅದೇ ರೀತಿ ಇದೀಗ ಜಿಲ್ಲೆಯಲ್ಲಿ ಹುಲಿ ಬಂತು ಹುಲಿ..’ ಕತೆ ಕಟ್ಟಲಾಗುತ್ತಿದೆ.
ದಕ್ಷಿಣ ಕೊಡಗಿನಲ್ಲಿ ಹುಲಿ ನಿರಂತರ ದಾಳಿ ಮಾಡುತ್ತಿದ್ದು, ಜಾನುವಾರುಗಳಲ್ಲದೆ ಎರಡು ಮಾನವ ಜೀವಗಳನ್ನು ಬಲಿ ಪಡೆದಿದೆ. ಹುಲಿ ದಾಳಿಯಿಂದ ಜನತೆ ಭಯಭೀತರಾಗಿದ್ದು, ಅರಣ್ಯ ಇಲಾಖೆ ಹುಲಿ ಸೆರೆಗೆ ಕಾರ್ಯಾಚರಣೆ ರೂಪಿಸಿದೆ. ಈ ನಡುವೆ ಕೆಲವರು ‘ಹುಲಿ ಇದೆ’ ಎಂದು ಸುಳ್ಳು ಮಾಹಿತಿ ನೀಡಿ ಸುಖಾಸುಮ್ಮನೆ ಅರಣ್ಯ ಇಲಾಖೆ ಯವರನ್ನು ಗೋಳು ಹುಯಿದುಕೊಳ್ಳುವುದೂ ಆಗುತ್ತಿದೆ.
ಅಂತಹುದೇ ಒಂದು ಘಟನೆ ಇಲ್ಲಿಗೆ ಸಮೀಪದ ಕರ್ಣಂಗೇರಿ ಯಲ್ಲಿ ನಡೆದಿದೆ. ನಿನ್ನೆ ಸೋಮವಾರಪೇಟೆ ರಸ್ತೆಯಲ್ಲಿರುವ ಕರ್ಣಂಗೇರಿಯ ಅಂಥೋಣಿ ಎಸ್ಟೇಟ್ ಬಳಿಯ ಗದ್ದೆಯಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿರುವುದಾಗಿ ಅರಣ್ಯ ಇಲಾಖೆಗೆ ಯಾರೋ ಮಾಹಿತಿ ನೀಡಿದ್ದಾರೆ.
ಮಾಹಿತಿ ದೊರೆತೊಡನೆ ನಿನ್ನೆ ಸಂಜೆ ವೇಳೆ ಅರಣ್ಯ ಇಲಾಖಾ ಸಿಬ್ಬಂದಿಗಳು ಬಂದೂಕು ಸಹಿತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇಂದೂ ಕೂಡ ತೆರಳಿ ಪರಿಶೀಲನೆ ಮಾಡಿದ್ದಾರೆ. ಆದರೆ, ಯಾವುದೇ ಗುರುತು ಪತ್ತೆಯಾಗಲಿಲ್ಲ. ಈ ಬಗ್ಗೆ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಲ್ಲಿ ಮಾಹಿತಿ ಬಯಸಿದ ಸಂದರ್ಭ ಅಂತಹ ಯಾವುದೇ ಗುರುತು ಪತ್ತೆಯಾಗಿಲ್ಲ. ಸುಳ್ಳು ಮಾಹಿತಿ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತ ‘ಕರ್ಣಂಗೇರಿಯಲ್ಲಿ ಹುಲಿ ಹೆಜ್ಜೆ ಪತ್ತೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಭಯಭೀತರಾದ ಗ್ರಾಮಸ್ಥರು ರಸ್ತೆಗಿಳಿಯಲು ಹೆದರಿಕೊಂಡ ಪ್ರಸಂಗ ನಡೆದಿದೆ. ಗ್ರಾಮದಲ್ಲಿ, ರಸ್ತೆಯಲ್ಲಿ ಇಂದು ಜನ ಸಂಚಾರ ಅತಿ ವಿರಳವಾಗಿತ್ತು. ಮೊದಲೇ ಜಿಲ್ಲೆಯ ಜನತೆ ಭೀತಿಯಲ್ಲಿರುವಾಗ ಇಂತಹ ಕುಚೇಷ್ಟೆಗಳಿಂದ ಕೆಲವರು ವಿಕೃತಾನಂದ ಹೊಂದುತ್ತಿರುವುದು ದುರಂತವೇ ಸರಿ.’ -ಸಂತೋಷ್