ಸೋಮವಾರಪೇಟೆ,ಮಾ. ೩ : ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಅವರು, ೧೮ ವರ್ಷದೊಳಗಿನ ಎಲ್ಲಾ ಹೆಣ್ಣು ಮತ್ತು ಗಂಡು ಮಕ್ಕಳು ಈ ಕಾಯ್ದೆಯ ವ್ಯಾಪ್ತಿಗೊಳಪಡುತ್ತಾರೆ. ಹೆಣ್ಣು ಮಕ್ಕಳೇ ಹೆಚ್ಚಾಗಿ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ರಕ್ಷಣೆ ಒದಗಿಸಿ, ನ್ಯಾಯ ಕೊಡಿಸುವುದಕ್ಕಾಗಿಯೇ ಈ ಕಾಯ್ದೆ ಜಾರಿಗೆ ಬಂದಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದ ವಕೀಲೆ ಪವಿತ್ರ ಮಾತನಾಡಿ, ಲೈಂಗಿಕ ಕಿರುಕುಳ ಅನುಭವಿಸುವ ಯಾವುದೇ ಹೆಣ್ಣು ಮಕ್ಕಳು ಭಯಪಡುವ ಅಗತ್ಯವಿಲ್ಲ. ಅಂತಹ ಪ್ರಕರಣಗಳಿದ್ದರೆ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಬೇಕು. ಇಂತಹ ಸಂದರ್ಭ ಸಂತ್ರಸ್ತರ ಮಾಹಿತಿಯನ್ನು ಗೌಪ್ಯವಾಗಿಟ್ಟು ನ್ಯಾಯ ಒದಗಿಸಿಕೊಡಲಾಗುವುದು. ಈ ಕಾಯ್ದೆ ಶೋಷಿತ ಹೆಣ್ಣು ಮಕ್ಕಳಿಗೆ ಬ್ರಹ್ಮಾಸ್ತçವಾಗಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಹೆಚ್.ಕೆ. ಉಮೇಶ್‌ಕುಮಾರ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯಶವಂತ್‌ಕುಮಾರ್ ಅವರುಗಳು ಉಪಸ್ಥಿತರಿದ್ದರು.