ವೀರಾಜಪೇಟೆ, ಮಾ. ೩ : ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್‌ಪೋಸ್ಟ್ಗೆ ತಾಲೂಕು ತಹಶೀಲ್ದಾರ್ ಯೋಗಾನಂದ್ ಅವರು ಭೇಟಿ ನೀಡಿ ಗಡಿಯಲ್ಲಿರುವ ಕೊರೊನಾ ತಪಾಸಣೆಯ ತಂಡದ ಕಾರ್ಯ ವೈಖರಿಯನ್ನು ಪರಿಶೀಲಿಸಿ ದರು. ಕೇರಳ ರಾಜ್ಯದ ಆಯ್ದ ಭಾಗಗಳಿಂದ ಕೊರೊನಾದ ನೆಗೆಟಿವ್ ದೃಢೀಕರಣ ಪತ್ರ ಹೊಂದಿರುವ ಎಲ್ಲಾ ವಾಹನಗಳಿಗೆ ಕರ್ನಾಟಕ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಪ್ರತಿದಿನ ಕೇರಳದ ವಿವಿಧೆಡೆಗಳಿಂದ ೫೦೦ರಿಂದ ೬೦೦ ವಾಹನಗಳು ಚೆಕ್‌ಪೋಸ್ಟ್ ಮೂಲಕ ರಾಜ್ಯದ ಗಡಿಯನ್ನು ಪ್ರವೇಶಿಸುತ್ತಿವೆ ಎಂದು ತಹಶೀಲ್ದಾರ್ ಯೋಗಾನಂದ ಅವರು ತಿಳಿಸಿದರು.

ಚೆಕ್‌ಪೋಸ್ಟ್ ಗೇಟ್‌ನಲ್ಲಿ ಕೊರೊನಾ ತಪಾಸಣೆಗಾಗಿ ಕಂದಾಯ, ಅರಣ್ಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಗಲಿರುಳೆನ್ನದೆ ದುಡಿಯುತ್ತಿದ್ದಾರೆ. ಚೆಕ್‌ಪೋಸ್ಟ್ನಲ್ಲಿ ಆರಂಭದಲ್ಲಿ ವಾಹನ ಚಾಲಕರು, ಪ್ರಯಾಣಿಕರ ನಡುವೆ ತಪ್ಪು ತಿಳುವಳಿಕೆಯಿಂದ ಗೊಂದಲ ಉಂಟಾಗಿದ್ದು ಈಗ ಎಲ್ಲ ವಾಹನಗಳು ಕೋವಿಡ್‌ನ ಷರತ್ತಿಗೊಳಪಟ್ಟು ಅಂತರರಾಜ್ಯ ಸಂಚರಿಸಲು ಅವಕಾಶ ನೀಡಲಾಗಿದೆ.

ದಕ್ಷಿಣ ಕೊಡಗಿನ ಕುಟ್ಟ ಚೆಕ್‌ಪೋಸ್ಟ್ನಲ್ಲಿ ಕೊರೊನಾ ತಪಾಸಣೆ ಮುಂದುವರೆದಿದೆ. ಅಲ್ಲಿಯೂ ಇಲಾಖೆಯ ಸಿಬ್ಬಂದಿಗಳು ಕೊರೊನಾದ ನೆಗೆಟಿವ್ ರಿಪೋರ್ಟ್ ತಂದ ವಾಹನಗಳಿಗೆ ಪ್ರವೇಶ ನೀಡುತ್ತಿ ದ್ದಾರೆ. ಕುಟ್ಟ ಹಾಗೂ ಮಾಕುಟ್ಟ ಚೆಕ್‌ಪೋಸ್ಟ್ಗಳಲ್ಲಿ ಕೊರೊನಾ ತಪಾಸಣೆಯ ಸಿಬ್ಬಂದಿಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದ್ದು ಕೊರೊನಾ ಷರತ್ತನ್ನು ಪಾಲಿಸುವಂತೆ ತಿಳಿಸಲಾಗಿದೆ, ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವ ಪ್ರಯಾಣಿಕರಿಗೂ ಈ ತನಕ ಯಾವುದೇ ತೊಂದರೆಯಾಗಿಲ್ಲ ಎಂದು ಯೋಗಾನಂದ ತಿಳಿಸಿದರು.