ಮಡಿಕೇರಿ, ಮಾ. ೩ : ಎ.ಸಿ.ಬಿ.ಯನ್ನು ರದ್ದುಮಾಡಿ ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಸ್ವಾತಂತ್ರö್ಯವನ್ನು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಘಟಕದ ಪ್ರಮುಖರು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರಕಾರದ ಹಿಡಿತದಲ್ಲಿರುವ ಎಸಿಬಿಯನ್ನು ತಾವು ಮುಖ್ಯಮಂತ್ರಿಗಳಾದ ಮರುಕ್ಷಣ ೨೪ ಗಂಟೆಯೊಳಗೆ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ಬಲಿಷ್ಠಗೊಳಿಸುವುದಾಗಿ ಹೇಳಿಕೆ ನೀಡಿದ್ದರು.

ಆದರೆ ಇಂದು ಮುಖ್ಯಮಂತ್ರಿ ಪದವಿಗೇರಿ ೨ ವರ್ಷ ಕಳೆದರೂ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಸ್ವಾತಂತ್ರ‍್ಯವನ್ನು ನೀಡಿಲ್ಲ. ಆದ್ದರಿಂದ ಇನ್ನಾದರೂ ಸಿ.ಎಂ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕೆಂದು ಪ್ರಮುಖರು ಆಗ್ರಹಿಸಿದರು.

ಈ ಸಂದರ್ಭ ಮಡಿಕೇರಿ ತಾಲೂಕು ಅಧ್ಯಕ್ಷ ಅಜಿತ್ ಕೊಟ್ಟಕೇರಿಯನ, ಉಪಾಧ್ಯಕ್ಷ ಪ್ರದೀಪ್ ಮರಗೋಡು, ಮಹಾ ಪ್ರಧಾನ ಕಾರ್ಯದರ್ಶಿ ಯೋಗೇಶ್ ಟಿ ನೆಕ್ಕಿಲ, ಕಾರ್ಯದರ್ಶಿ ಉಮೇಶ್ ಗೌಡ ಇತರರು ಇದ್ದರು.