ಸೋಮವಾರಪೇಟೆೆ, ಮಾ. ೨: ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ರೂ. ೧೦ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ವಿವಿಧ ಗ್ರಾ.ಪಂ. ಗಳಲ್ಲಿ ಕುಡಿಯುವ ನೀರಿನ ಘಟಕದ ಸ್ಥಾಪನೆ ಹಾಗೂ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲಾಗುವ ರೂ. ೩೦ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿ ದರು. ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಕುಂದಳ್ಳಿ, ಕುಮಾರಳ್ಳಿ ಹಾಗೂ ಕೊತ್ನಳ್ಳಿ ಭಾಗಕ್ಕೆ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ರೂ. ೮೧.೩೬ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು. ಇದರೊಂದಿಗೆ ಶಾಂತಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಭಿಮಠ ಬಾಚಳ್ಳಿ, ಹರಗ, ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಘಟಕ ನಿರ್ಮಾಣಕ್ಕೆ ೧ ಕೋಟಿ ೬೮ ಸಾವಿರ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಇದೇ ಸಂದರ್ಭ ಲೋಕೋಪಯೋಗಿ ಇಲಾಖೆಯಿಂದ ೧೦ ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗುವ ತಲ್ತರೆಶೆಟ್ಟಳ್ಳಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಕೂತಿ, ಚಿಕ್ಕತೋಳೂರಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ೧ಕೋಟಿ ೮೯ ಲಕ್ಷದ ೬೬ ಸಾವಿರ ಅನುದಾನದಲ್ಲಿ ಘಟಕಗಳ ಸ್ಥಾಪನೆ, ಹಾನಗಲ್ಲು ಗ್ರಾ.ಪಂ.ಯ ಹಾನಗಲ್ಲು, ಹಾನಗಲ್ಲು ಶೆಟ್ಟಳ್ಳಿ, ಯಡೂರು ಗ್ರಾಮದಲ್ಲಿ ೧ ಕೋಟಿ ೭೩ ಲಕ್ಷದ ೩೯ ಸಾವಿರ ವೆಚ್ಚದ ಕಾಮಗಾರಿಗೆ ಶಾಸಕ ಅಪ್ಪಚ್ಚುರಂಜನ್ ಭೂಮಿ ಪೂಜೆ ನೆರವೇರಿಸಿದರು. ರೂ. ೨.೩೭ ಕೋಟಿ ವೆಚ್ಚದಲ್ಲಿ ಚೌಡ್ಲು ಗ್ರಾ.ಪಂ.ನ ಚೌಡ್ಲು ಮತ್ತು ಕಿಬ್ಬೆಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ, ೨೦ ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕೈಗೊಳ್ಳಲು ಉದ್ದೇಶಿಸಲಾಗಿರುವ ಮುತ್ತಪ್ಪ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ರೂ. ೧.೩೬ ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ನೇರುಗಳಲೆ, ನೇಗಳ್ಳೆ ಕರ್ಕಳ್ಳಿ, ಹೊಸಳ್ಳಿ, ಮಸಗೋಡು, ಚಿಕ್ಕಬ್ಬೂರು, ನೇರಳೆ, ನೇರುಗಳಲೆ ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿ, ಬೇಳೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ರೂ. ೧.೯೩ ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕುಸುಬೂರು, ಬೇಳೂರು ಬಸವನಳ್ಳಿ, ಬಳಗುಂದ ಗ್ರಾಮಗಳ ಕುಡಿಯುವ ನೀರಿನ ಕಾಮಗಾರಿಗೆ ಅಪ್ಪಚ್ಚುರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಶಾಸಕರು, ಕೋವಿಡ್-೧೯ರ ಸಂಕಷ್ಟದ ನಡುವೆಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅಭಿವೃದ್ಧಿ ಕಾರ್ಯಗಳು ಹಾಗೂ ಮೂಲಭೂತ ಸೌಕರ್ಯಗಳಿಗೆ ಕೊರತೆ ಯಾಗದಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಕುಡಿಯುವ ನೀರಿನ ಶಾಶ್ವತ ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ಯಾವದೇ ಸಂದರ್ಭದಲ್ಲೂ ಕಾಮಗಾರಿ ಕಳಪೆಯಾಗದಂತೆ ಸಂಬAಧಿಸಿದ ಗುತ್ತಿಗೆದಾರ ಹಾಗೂ ಅಭಿಯಂತರರು ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಕಾಮಗಾರಿ ಕಳಪೆಯಾದರೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗು ವುದು ಎಂದು ಎಚ್ಚರಿಕೆ ನೀಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯರಾದ ತಂಗಮ್ಮ, ಧರ್ಮಪ್ಪ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ಅಭಿಯಂತರ ಕೀರ್ತನ್, ಲೊಕೋಪಯೋಗಿ ಇಲಾಖೆಯ ಎಇಇ ಮೋಹನ್ಕುಮಾರ್ ಸೇರಿದಂತೆ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರುಗಳು, ಸದಸ್ಯರುಗಳು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.