ಮಡಿಕೇರಿ, ಮಾ. ೨: ಯಾರೇ ಆಗಲೀ ತಮ್ಮ ಜಾತಿ ಹಾಗೂ ಭಾಷೆಯ ಬಗ್ಗೆ ಕೀಳರಿಮೆ ಹೊಂದಬಾರದು; ಅಭಿಮಾನವಿಟ್ಟುಕೊಳ್ಳಬೇಕೆಂದು ಶಕ್ತಿ ಪತ್ರಿಕೆ ಉಪ ಸಂಪಾದಕ ಕುಡೆಕಲ್ ಸಂತೋಷ್ ಹೇಳಿದರು.
ಮಡಿಕೇರಿಯ ಮಡಿವಾಳರ ಅಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ ದಾಸವಾಳದಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಮಡಿವಾಳರ ಮಾಚಿದೇವ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ದುರ್ಬಲರ ಶೋಷಣೆ ವಿರುದ್ಧ ಜಾಗೃತಿ ಮೂಡಿಸಿ, ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಸಾಮಾಜಿಕ ಕ್ರಾಂತಿ ಮೂಡಿಸಿದ ಬಸವಣ್ಣನವರಂತೆ ಮಾಚಿದೇವರು ಕೂಡ ಅಗ್ರಗಣ್ಯರು. ಇಂತಹ ಶರಣರು ರಾಷ್ಟçಕ್ಕೆ ಮಾದರಿಯಾದ ಮಹನೀಯರು. ಇಂತಹ ಮಹನೀಯರ ಜನ್ಮ ಜಯಂತಿ ಆಚರಣೆಯನ್ನು ಸರಕಾರ ಇತ್ತೀಚೆಗಷ್ಟೆ ಜಾರಿಗೆ ತಂದಿದೆ. ಈ ದಿನಾಚರಣೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಸರಕಾರದೊಡಗೂಡಿ ಎಲ್ಲ ಸಮುದಾಯದವರನ್ನು ಸೇರಿಸಿ ಆಚರಣೆ ಮಾಡಬೇಕು. ಆ ಮೂಲಕ ಮಾಚಿದೇವರಂತಹ ಮಹನೀಯರ ಸಾಧನೆಗಳು ಎಲ್ಲರಿಗೂ ತಿಳಿಯುವಂತಾಗಬೇಕೆAದು ಹೇಳಿದರು.
ಜಾತ್ಯತೀತ ರಾಷ್ಟçದಲ್ಲಿ ಪ್ರತಿಯೋರ್ವರೂ ಒಂದಲ್ಲ ಒಂದು ಜಾತಿಯವನಾಗಿ ಜನಿಸಲೇಬೇಕಿದೆ. ತನ್ನ ಜಾತಿ ಹಾಗೂ ಭಾಷೆಯ ಬಗ್ಗೆ ಎಂದಿಗೂ ಕೀಳರಿಮೆ ಇರಬಾರದು. ಅಭಿಮಾನದಿಂದ ಕಾಣುವದರೊಂದಿಗೆ ಇತರರ ಬಗ್ಗೆಯೂ ಗೌರವ ತೋರಬೇಕು. ನಮ್ಮ ಸಂಸ್ಕೃತಿ, ಪದ್ಧತಿಗಳ ಬಗ್ಗೆ ಇತರರಿಗೂ ಪರಿಚಯ ಮಾಡಿಸಬೇಕು. ಸಮಾಜವನ್ನೇ ಮಡಿ ಮಾಡುವ ಮಡಿವಾಳರಿಗೆ ಸ್ಥಾನಮಾನವಿದೆ; ಅದಕ್ಕೆ ಹೆಮ್ಮೆಪಡಬೇಕೆಂದು ಅಭಿಪ್ರಾಯಪಟ್ಟರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೂಡಕಂಡಿ ದಯಾನಂದ ಅವರು ಮಡಿವಾಳ ಮಾಚಯ್ಯ ಅವರ ಜೀವನ ಸಾಧನೆ, ವಚನ ಸಾಹಿತ್ಯಕ್ಕೆ ಅವರ ಕೊಡುಗೆ, ಅವರ ಕಾಯಕ ನಿಷ್ಠೆಯ ಬಗ್ಗೆ ವಿವರಣೆ ನೀಡಿದರಲ್ಲದೆ, ಕಾಯಕದ ಮೂಲಕ ಅಧ್ಯಾತ್ಮ ಕಂಡುಕೊAಡ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು. ಮಡಿವಾಳರ ಮಾಚಿದೇವ ಕೇವಲ ಒಂದು ಸಮಾಜಕ್ಕೆ, ಸಮುದಾಯಕ್ಕೆ ಸೀಮಿತವಾದವರಲ್ಲ; ಅವರ ದಿವ್ಯ ಆದರ್ಶಗಳನ್ನು ಪ್ರತಿಯೋರ್ವರೂ ಅನುಸರಿಸಬೇಕೆಂದು ಕಿವಿಮಾತು ಹೇಳಿದರು. ಸಂಘದ ಅಧ್ಯಕ್ಷ ಪಿ.ಜಿ. ಸುಕುಮಾರ್ ಆಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಮುದಾಯದ ಹಿರಿಯರಾದ, ಸ್ವಾತಂತ್ರö್ಯ ಹೋರಾಟಗಾರ ಸುಬ್ರಮಣಿ, ಭಕ್ತವತ್ಸಲ, ಸಂಘದ ಖಜಾಂಚಿ ಎ.ಬಿ. ಅರುಣ್ ಇದ್ದರು. ದೀಪಿಕಾ ಪ್ರಾರ್ಥಿಸಿದರೆ, ಗೌರವ ಅಧ್ಯಕ್ಷ ಪಿ.ಜಿ.ಮಂಜುನಾಥ್ ಸ್ವಾಗತಿಸಿದರು. ಚೇತನ್ ನಿರೂಪಿಸಿ, ವಂದಿಸಿದರು