ಮಡಿಕೇರಿ, ಮಾ. ೨: ಕೇರಳದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆ ಪ್ರವೇಶಕ್ಕೆ ಕೆಲ ನಿಯಮ ಹೇರಿರುವುದ ರಿಂದ ನವಜೀವನಕ್ಕೆ ಕಾಲಿಡಬೇಕಾದ ಜೋಡಿ ಪರದಾಡುವಂತಾಯಿತು. ಇದೀಗ ಅಡೆತಡೆ ದಾಟಿ ಜೋಡಿ ಸಪ್ತಪದಿ ತುಳಿದಿದ್ದಾರೆ.
ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ರೋಹಿಣಿ ಜಯಪ್ಪನಾಯ್ಕ ದಂಪತಿ ಪುತ್ರಿ ಆಶಾ ಮತ್ತು ಕಾಸರಗೋಡು ಜಿಲ್ಲೆ ಮುಳಿಯಾರ್ನ ನಾರಾಯಣ ನಾಯರ್ ಮತ್ತು ಗೀತಾ ದಂಪತಿ ಪುತ್ರ ಪ್ರಮೋದ್ ವಿವಾಹ ಎರಡು ತಿಂಗಳ ಹಿಂದೆ ನಿಶ್ಚಯವಾಗಿತ್ತು.
ಆದರೆ, ಕೇರಳದಿಂದ ಕೊಡಗಿಗೆ ಬರುವವರು ೭೨ ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ತರಲೇಬೇಕಾಗಿದೆ. ವರನ ಕಡೆಯಿಂದ ೩೫ ಜನರು ಮದುವೆಗೆ ಹೊರಟಿದ್ದರು, ಎಲ್ಲರಿಗೂ ಕೋವಿಡ್ ಪರೀಕ್ಷೆ ಎಂದರೆ ಅದಕ್ಕಾಗಿ ಸುಮಾರು ೯೦ ಸಾವಿರ ರೂ. ವೆಚ್ಚ ಭರಿಸಬೇಕಿತ್ತು. ಸರ್ಕಾರದ ನಿಯಮದಿಂದಾಗಿ ಮದುವೆಯೇ ನಿಲ್ಲುವ ಆತಂಕವೂ ಎದುರಾಗಿತ್ತು. ವಧುವಿನ ಕಡೆಯವರು ಮದುವೆ ಮುಂದೂಡುವ ಬಗ್ಗೆಯೂ ಯೋಚಿಸಿದ್ದರು. ವರ ಕೂಡ ವರದಿ ಪಡೆಯಲು ಪರದಾಡುವಂತಾಯಿತು. ಆದರೆ, ಎಲ್ಲಾ ಅಡೆ-ತಡೆಗಳನ್ನೂ ದಾಟಿ ಪ್ರಮೋದ್ ಕೆಲವು ಕುಟುಂಬ ಸದಸ್ಯರ ಜೊತೆ ಆಗಮಿಸಿ ಮಡಿಕೇರಿಯಲ್ಲಿ ಆಶಾ ಅವರ ಕೈ ಹಿಡಿದಿದ್ದಾರೆ.
ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ನಡೆದ ಸರಳ ವಿವಾಹದಲ್ಲಿ ಕೆಲವು ಜನರು ಮಾತ್ರ ಪಾಲ್ಗೊಂಡಿದ್ದರು. ಕೇರಳದಿಂದ ವಿವಾಹಕ್ಕೆ ಬಂದವರು ನೂತನ ದಂಪತಿಗಳ ಜೊತೆ ವಾಪಸ್ ಆಗಿದ್ದಾರೆ.