ಮಡಿಕೇರಿ, ಮಾ. ೧: ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರಿಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಬಜೆಟ್‌ನಲ್ಲಿ ವೇತನ ಹೆಚ್ಚಳ ಮಾಡಬೇಕು. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಂಕಷ್ಟದ ಜೀವನ ಸಾಗಿಸುತ್ತಿದ್ದು, ಸರ್ಕಾರ ಕೂಡಲೇ ನಿವೃತ್ತಿಯಾದ ಸಿಬ್ಬಂದಿಗಳಿಗೆ ಪಿಂಚಣಿ ಹಾಗೂ ವೈದ್ಯಕೀಯ ಸವಲತ್ತನ್ನು ಜಾರಿಗೊಳಿಸಬೇಕು. ಸರ್ಕಾರ ಕಳಪೆ ಮಟ್ಟದ ಸಮವಸ್ತç ನೀಡುತ್ತಿದ್ದು, ಅದನ್ನು ವಾಪಾಸ್ ಪಡೆಯಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಗೌರವ ಧನ ಹೆಚ್ಚಳ ಮಾಡುವ ಬಗ್ಗೆ ಘೋಷಿಸಿದ್ದು, ಅದನ್ನು ಜಾರಿಗೊಳಿಸಬೇಕು, ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ ೫೦ ಸಾವಿರ ಹಾಗೂ ಸಹಾಯಕಿಯರಿಗೆ ರೂ. ೩೦ ಸಾವಿರ ಹಿಡಿಗಂಟು ನೀಡಲಾಗುತ್ತಿತ್ತು. ಅದನ್ನು ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದು, ಕೂಡಲೇ ಹಿಡಿಗಂಟು ಹಾಗೂ ನಿವೃತ್ತಿ ವೇತನ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷೆ ಕೆ.ಎಸ್ ಮುತ್ತಮ್ಮ, ಕಾರ್ಯದರ್ಶಿ ಐ.ಎ ಅಕ್ಕಮ್ಮ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಪದಾಧಿಕಾರಿ ಕೆ.ಕೆ. ಶಾರದ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಕೆ.ಎ. ಕಸ್ತೂರಿ, ಅಂಗನವಾಡಿ ಕಾರ್ಯಕರ್ತೆ ಪವಿತ್ರ ಇದ್ದರು