ಕಣಿವೆ, ಮಾ. ೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿನ ಕಾವೇರಿ ನದಿ ದಂಡೆಯಲ್ಲಿದ್ದ ಏತ ನೀರಾವರಿ ಯೋಜನಾ ಘಟಕದ ಮೇಲೆ ಸಣ್ಣ ನೀರಾವರಿ ಇಲಾಖೆ ಕೊನೆಗೂ ಕಣ್ಣು ತೆರೆದಿದೆ.
ಇದೀಗ ರೂ. ೧.೫೦ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಘಟಕದ ಪುನಶ್ಚೇತನ ಕಾಮಗಾರಿಯನ್ನು ಆರಂಭಿಸಲಾಗಿದೆ. ಕಳೆದ ೪೫ ವರ್ಷಗಳ ಹಿಂದೆ ಅಂದರೆ ೧೯೭೫ರಲ್ಲಿ ಸ್ಥಾಪನೆಯಾಗಿದ್ದ ಈ ಏತ ನೀರಾವರಿ ಯೋಜನೆ ಕೂಡ್ಲೂರು ಹಾಗೂ ಕೂಡುಮಂಗಳೂರು ಎರಡೂ ಗ್ರಾಮಗಳ ೧೫೦೦ ಎಕರೆ ಭೂಮಿಗೆ ನೀರುಣಿಸುತ್ತಿತ್ತು. ಆದರೆ, ಕಳೆದ ಮೂರು ದಶಕಗಳ ಈಚೆಗೆ ಕೂಡ್ಲೂರು ಗ್ರಾಮದಲ್ಲಿ ಕೈಗಾರಿಕಾ ಘಟಕ ಸರಿ ಸುಮಾರು ೪೦೦ ಎಕರೆ ಜಾಗದಲ್ಲಿ ಆರಂಭವಾಯಿತು. ಹಾಗೆಯೇ ಕುಶಾಲನಗರ ಪಟ್ಟಣ ವಾಣಿಜ್ಯ ನಗರವಾಗಿ ಬೆಳವಣಿಗೆ ಕಾಣುತ್ತಿದ್ದಂತೆಯೇ ಈ ಕೂಡ್ಲೂರು ಹಾಗೂ ಕೂಡುಮಂಗಳೂರು ಗ್ರಾಮಗಳ ಕೃಷಿ ಭೂಮಿ ವಸತಿ ಪ್ರದೇಶವಾಗಿ ಮಾರ್ಪಟ್ಟ ಕಾರಣ ಈ ಏತ ನೀರಾವರಿ ಯೋಜನೆ ಕಳೆಗುಂದಿತ್ತು.
ತಲತಲಾಂತರದಿAದ ಮಾಡಿಕೊಂಡು ಬಂದಿದ್ದ ಕೃಷಿ ಪದ್ಧತಿಯನ್ನು ಕೈ ಬಿಡದೇ ಕೆಲವೊಂದು ಕುಟುಂಬಗಳು ಹಾಗೆ ಜತನವಾಗಿ ಕಾಪಾಡಿ ಕೊಂಡು ಬಂದ ಹಿನ್ನೆಲೆಯಲ್ಲಿ ಅಳಿದುಳಿದ ಕೃಷಿ ಭೂಮಿಗೆ ಕೃಷಿಗೆ ನೀರು ಹರಿಸಲು ಈ ಘಟಕವನ್ನು ಪುನಶ್ಚೇತನ ಗೊಳಿಸಬೇಕಾದ ತುರ್ತು ಅನಿವಾರ್ಯತೆಯ ಬಗ್ಗೆ ‘ಶಕ್ತಿ’ ಈ ಹಿಂದೆ ವರದಿ ಪ್ರಕಟಿಸಿತ್ತು. ಕೊನೆಗೂ ರೈತರ ಹಿತಾಸಕ್ತಿಯನ್ನು ಮನಗಂಡು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಒಂದೂವರೆ ಕೋಟಿ ರೂ.ಗಳನ್ನು ಬಿಡುಗಡೆ ಗೊಳಿಸಿರುವ ಕಾರಣ ಕಾಮಗಾರಿ ಭರದಿಂದ ಸಾಗುತ್ತಿದೆ ಎಂದು ಇಂಜಿನಿಯರ್ ರಫೀಕ್ ತಿಳಿಸಿದರು. ಕಾಮಗಾರಿ ೨೦೨೨ರ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಲಿದೆ ಎಂದರು. ಏತನೀರಾವರಿ ಯೋಜನೆಯ ಪುನಶ್ಚೇತನಕ್ಕೆ ಕಾರಣವಾದ ‘ಶಕ್ತಿ’ ವರದಿಗೆ ಕೂಡ್ಲೂರು ಗ್ರಾಮದ ಕೃಷಿಕರಾದ ಚನ್ನಪ್ಪ, ಲಕ್ಷö್ಮಣ ರಾಜೇ ಅರಸು, ರಾಜಾಚಾರಿ ಮೊದಲಾದವರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. -ಕೆ. ಎಸ್. ಮೂರ್ತಿ