ಶನಿವಾರಸಂತೆ, ಮಾ. ೧: ಶನಿವಾರಸಂತೆ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ಇಂದು ಜಲಜೀವನ್ ಮಿಷನ್ ಯೋಜನೆ ಸಭೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ಸಂಯೋಜಕ ಅಕ್ಷಾಂತ್ ಮತ್ತು ಬಿಂದು ಅವರುಗಳು ಮಾತನಾಡಿ, ಈ ಯೋಜನೆಯಡಿ ಗ್ರಾಮದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಪ್ರತಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ ಪ್ರತಿಯೊಬ್ಬರಿಗೆ ೫೫ ಲೀಟರ್ ನೀರಿನಂತೆ ನೀರು ಒದಗಿಸಲಾಗುವುದು ಹಾಗೂ ಪ್ರತಿ ನಲ್ಲಿಗೆ ಮೀಟರ್ ಅಳವಡಿಸುವುದರ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಮಟ್ಟದ ನೀರು ನೈರ್ಮಲ್ಯ ಸಮಿತಿಯಲ್ಲಿ ಪ್ರತಿ ಗ್ರಾಮಕ್ಕೆ ಬೇಕಾಗಿದ್ದ ಕುಡಿಯುವ ನೀರಿನ ಕಾಮಗಾರಿಗಳನ್ನು ಪಟ್ಟಿ ಮಾಡಿ ಇಲಾಖೆಗೆ ಸಲ್ಲಿಸುವಂತೆ ಗ್ರಾ.ಪಂ. ಸದಸ್ಯರುಗಳು ಸಭೆಗೆ ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರುಗಳಾದ ಗೀತಾ ಹರೀಶ್, ಫರ್ಜಾನ ಶಾಹಿದ್ ಖಾನ್, ಎಸ್.ಸಿ. ಶರತ್ ಶೇಖರ್, ಸರ್ದಾರ್, ಸರಸ್ವತಿ, ಕಾವೇರಿ, ಆದಿತ್ಯಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯಚಾರ್, ಕಂಪ್ಯೂಟರ್ ನಿರ್ವಾಹಕಿಯರಾದ ಫೌಜೀಯಾ, ಲೀಲಾ, ಅಂಗನವಾಡಿ ಕಾರ್ಯಕರ್ತೆಯರು, ನೀರು ನಿರ್ವಾಹಕರುಗಳು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಸ್ವಾಗತಿಸಿ, ವಂದಿಸಿದರು.