ಕಾಡಾನೆ ದಾಳಿ
ಸಿದ್ದಾಪುರ, ಫೆ. ೨೮: ಚೆನ್ನಂಗಿ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ಮುಂದುವರೆದ ಕಾಡಾನೆ ದಾಳಿಯಿಂದ ಮನೆಯೊಂದಕ್ಕೆ ಹಾನಿಯಾಗಿದೆ. ಕಳೆದ ಒಂದು ವಾರಗಳಿಂದ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ.
ಮನೆಗಳ ಬಾಗಿಲು ಹಾಗೂ ಗೋಡೆಗಳಿಗೆ ಹಾನಿಗೊಳಿಸುತ್ತಿವೆ. ಶನಿವಾರದಂದು ರಾತ್ರಿ ಬಸವನಹಳ್ಳಿಯ ಹಾಡಿಯ ನಿವಾಸಿ ಬೋಜ ಎಂಬವರ ಮನೆಗೆ ನುಗ್ಗಿದ ಕಾಡಾನೆ ಬಾಗಿಲನ್ನು ಮುರಿದು ಹಾನಿ ಮಾಡಿದೆ ಎಂದು ಹಾಡಿ ನಿವಾಸಿ ಮಹೇಶ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಹಾಡಿಗಳಲ್ಲಿ ಇರುವ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದ್ದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಹಾಡಿಯ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಸಕರಿಗೂ ಕೂಡ ದೂರು ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖಾಧಿಕಾರಿಗಳು ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ.