ಮಡಿಕೇರಿ, ಫೆ. ೨೮: ಕೊಡಗು ವೈಲ್ಡ್ ಮಾಸ್ಟರ್ಸ್ ವತಿಯಿಂದ ಏಪ್ರಿಲ್ ೧ ರಿಂದ ೧೮ ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಮುಕ್ತ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ರವಿಕಿರಣ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ಬಳಿಕ ಕೊಡಗಿನಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ೨೦ ಓವರ್‌ಗಳ ಪಂದ್ಯಾಟವಾಗಿದ್ದು, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರೂ ೧೦ ಸಾವಿರ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿಜೇತ ತಂಡಕ್ಕೆ ರೂ ೧ ಲಕ್ಷ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ ೬೦ ಸಾವಿರ ನಗದು ಹಾಗೂ ಬೆಳ್ಳಿ ಪದಕಗಳನ್ನು ಎಲ್ಲಾ ಆಟಗಾರರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ತಂಡ ನೋಂದಾಯಿಸಿಕೊಳ್ಳಲು ಮಾರ್ಚ್ ೨೦ ಕಡೆ ದಿನವಾಗಿದ್ದು, ಕರ್ನಾಟಕ ರಾಜ್ಯದ ಆಟಗಾರರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (೯೪೪೯೪೧೪೩೫೭, ೭೦೨೨೮೫೦೩೩೯)ಯನ್ನು ಸಂಪರ್ಕಿಸುವAತೆ ತಿಳಿಸಿದರು.

ಮಡಿಕೇರಿಯಲ್ಲಿ ಕ್ರಿಕೆಟ್ ಆಡಲು ಸುಸಜ್ಜಿತ ಮೈದಾನದ ಕೊರತೆ ಇದೆ. ಆದರೆ ಈಗ ಇರುವ ಜಿಲ್ಲಾ ಕ್ರೀಡಾಂಗಣವನ್ನು ಸಿಂಥೆಟಿಕ್ ಟರ್ಪ್ ಮಾಡಲಾಗುತ್ತಿದೆ ಎನ್ನಲಾಗಿದೆ. ಕೊಡಗಿನಿಂದ ಸಾಕಷ್ಟು ಮಂದಿ ಕ್ರೀಡಾಪಟುಗಳಿದ್ದು, ಜಿಲ್ಲಾ ಕ್ರೀಡಾಂಗಣವನ್ನು ಕ್ರಿಕೆಟ್ ಆಡಲು ಉಳಿಸಬೇಕೆಂದು ಮನವಿ ಮಾಡಿದರು.

ಸಂಘಟನೆ ಉಪಾಧ್ಯಕ್ಷ ಪ್ರಿನ್ಸ್ ಕುಶಾಲಪ್ಪ, ಕಾರ್ಯದರ್ಶಿ ಪ್ರಶಾಂತ್ ಕೆ.ಟಿ., ಖಜಾಂಚಿ ಪಂಚಮ್ ಸೂದನ, ಸಹ ಕಾರ್ಯದರ್ಶಿ ರಿಶಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.