ಮಡಿಕೇರಿ, ಫೆ. ೨೭: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ವತಿಯಿಂದ ಮಾ.೨ ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪಕ್ಷದ ಕಾರ್ಯದರ್ಶಿ ಈ.ರಾ. ದುರ್ಗಾಪ್ರಸಾದ್ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿಯಿಂದ ದೇಶದ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಆದರೆ, ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕೃಷಿ ರಂಗಕ್ಕೆ ಪಾಲನ್ನು ಶೇ.೮ ರಷ್ಟು ಕಡಿತಗೊಳಿಸಲಾಗಿದೆ. ಬಿಸಿ ಊಟ ಕಾರ್ಯಕ್ರಮಕ್ಕೆ ಕಳೆದ ವರ್ಷಕ್ಕಿಂತ ೧೪೦೦ ಕೋಟಿ ಕಡಿಮೆ ಹಣ ಮೀಸಲಿಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ೮೦೦ ಕೋಟಿ ಹಣ ಕಡಿತಗೊಳಿಸಲಾಗಿದೆ. ಕೆಲಸ ನೈಪುಣ್ಯ ವಿಕಸನಕ್ಕೆ ಶೇ.೩೫ರಷ್ಟು ಕಡಿಮೆಗೊಳಿಸಲಾಗಿದೆ. ದೇಶಿಯ ವಿದ್ಯಾಭ್ಯಾಸ ಮಿಷನ್‌ಗೆ ೫,೦೦೦ ಕೋಟಿ ಕಡಿತಗೊಳಿಸಲಾಗಿದೆ. ಇದರ ನಡುವೆ ಆಗರ್ಭ ಶ್ರೀಮಂತರನ್ನು ಸಂತೋಷಿಸಲು ಸಾರ್ವಜನಿಕ ಕ್ಷೇತ್ರಗಳಲ್ಲಿರುವ ಎಲ್ಲಾ ಉದ್ದಿಮೆಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.ಗೋಷ್ಠಿಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಎ.ಸಿ. ಸಾಬು ಇದ್ದರು.