ಸಿದ್ದಾಪುರ, ಫೆ. ೨೭: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ ಸಂಘ (ಸಿಐಟಿಯು) ಸಂಘಟನೆಯ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಸಭೆಯಲ್ಲಿ ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ಎನ್. ಅಬ್ದುಲ್ ರಹೀಮ್ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂಧನ ಬೆಲೆಗಳನ್ನು ಏರಿಕೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಬಡ ಜನರು ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೈನಂದಿನ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಬಡ ಜನತೆಯ ಜೀವನ ದುಸ್ಥರವಾಗಿದೆ ಎಂದರು. ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಪ್ರಮುಖರಾದ ಎನ್.ಡಿ. ಕುಟ್ಟಪ್ಪನ್, ಶಾಲಿ ಪೌಲೋಸ್, ಎನ್.ಕೆ. ಅನಿಲ್, ಸಿ.ಯು ಮುಸ್ತಫಾ, ತಂಗಚ್ಚನ್, ವೈಜು, ಮಂಜು, ಇನ್ನಿತರರು ಹಾಜರಿದ್ದರು.