ಕುಶಾಲನಗರ, ಫೆ. ೨೭: ಕ್ರೀಡೆಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಕುಶಾಲನಗರ ಪೊಲೀಸ್ ಉಪ ಅಧೀಕ್ಷಕರಾದ ಹೆಚ್.ಎಂ. ಶೈಲೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಮಾರ್ನಿಂಗ್ ಕ್ರಿಕೆಟರ್ಸ್ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ತೆರೆಮರೆಗೆ ಸರಿದಿದ್ದ ಕ್ರೀಡೆಗಳು ಮತ್ತೆ ಗರಿಗೆದರಿದ್ದು ಕೊರೊನಾ ಸೋಂಕಿನ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕಿದೆ ಎಂದು ಕಿವಿಮಾತು ಹೇಳಿದ ಶೈಲೇಂದ್ರ ಪ್ರತಿಯೊಬ್ಬರೂ ಕೂಡ ಕ್ರೀಡಾಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವೇ ಹೊರತು ಸೋಲು ಗೆಲುವು ಮುಖ್ಯವಲ್ಲ ಎಂದರು.

ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿದರು.

ಕುಶಾಲನಗರ ಕಾರ್ಯನಿರತ ಪತ್ರಕರ್ತರ ತಂಡ ಮತ್ತು ಪೊಲೀಸ್ ಇಲಾಖೆ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಉತ್ತಮ ಪ್ರದರ್ಶನ ನೀಡಿದ ಪೊಲೀಸ್ ಇಲಾಖೆ ತಂಡ ಗೆಲುವು ಸಾಧಿಸಿತು.

ಕಾರ್ಯಕ್ರಮದಲ್ಲಿ ಪ.ಪಂ. ಉಪಾಧ್ಯಕ್ಷೆ ಸುರಯ್ಯ ಭಾನು, ಸದಸ್ಯರಾದ ವಿ.ಎಸ್. ಆನಂದ ಕುಮಾರ್, ಉದ್ಯಮಿಗಳಾದ ಎಸ್.ಕೆ. ಸತೀಶ್, ಜಿ.ಎಲ್. ನಾಗರಾಜ್, ಮಾಜಿ ಸೈನಿಕ ಅಮೆ ಜನಾರ್ಧನ್, ಮಾರ್ನಿಂಗ್ ಕ್ರಿಕೆಟರ್ಸ್ ತಂಡದ ವೆಂಕಟೇಶ್, ಶಿವರಾಜ್, ರಿಜು ಬಸಪ್ಪ, ಪ್ರದೀಪ್, ಚಂದನ್ ಮತ್ತಿತರರು ಇದ್ದರು.