ಮಡಿಕೇರಿ, ಫೆ. ೨೭: ಮೈಸೂರು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ನಗರದ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಹಸಿರು ನಿಶಾನೆ ತೋರುವ ಮೂಲಕ ಸೇವೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಸರಕಾರಿ ಆಸ್ಪತ್ರೆಗಳ ರೋಗಿಗಳಿಗೆ ಆಂಬ್ಯುಲೆನ್ಸ್ ಸೇವೆ ದೊರಕಲಿದೆ. ತುರ್ತು ಸಂದರ್ಭದಲ್ಲಿ ಸೇವೆ ಬಳಸಿಕೊಳ್ಳುವಂತೆ ಕರೆ ನೀಡಿದರು.

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಕೇಶವಮೂರ್ತಿ ಮಾತನಾಡಿ, ಹೃದಯಾಘಾತದ ಸಂದರ್ಭದಲ್ಲಿ ಸಮಯೋಚಿತ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆ ಇದೆ. ಈ ಹಿನ್ನೆಲೆ ಸಕಾಲಕ್ಕೆ ಸಕಲ ವ್ಯವಸ್ಥೆಯುಳ್ಳ ಆಂಬ್ಯುಲೆನ್ಸ್ ಸಹಕಾರಿಯಾಗಲಿದೆ. ಅಲ್ಲದೆ ಆಂಬ್ಯುಲೆನ್ಸ್ನಲ್ಲಿ ನಮ್ಮ ಆಸ್ಪತ್ರೆಗೆ ಬರಬೇಕೆಂಬ ನಿಯಮವಿಲ್ಲ. ಯಾವುದೇ ಆಸ್ಪತ್ರೆಗಾದರು ರೋಗಿಯನ್ನು ಕೊಂಡೊಯ್ಯಬಹುದು. ಸರಕಾರಿ ಯೋಜನೆಗಳಾದ ಸಿ.ಜಿ.ಹೆಚ್.ಎಸ್ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಗಳನ್ನು ಅಂಗೀಕರಿಸಿ ಅರ್ಹ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ವೈದ್ಯರು ಸೂಚಿಸಿದ್ದಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ದೊರಕುತ್ತದೆ. ಅಗತ್ಯವಿರುವವರು ೯೮೫೩೯೯೮೫೩೯ ಸಂಖ್ಯೆಯನ್ನು ಸಂಪರ್ಕಿಸಬೇಕೆAದು ಮಾಹಿತಿ ನೀಡಿದರು.

ಹಿರಿಯ ವೈದ್ಯರಾದ ಡಾ.ಎಂ.ಜಿ. ಪಾಟ್ಕರ್ ಮಾತನಾಡಿ, ಖಾಸಗಿ ಆಸ್ಪತ್ರೆ ಸಮಾಜಮುಖಿಯಾಗಿ ಕಾರ್ಯಚಟುವಟಿಕೆ ನಡೆಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಡಿಕೇರಿ ಕೊಡವ ಸಮಾಜದ ಪೊಮ್ಮಕಡ ಕೂಟದ ಅಧ್ಯಕ್ಷೆ ಕವಿತಾ ಬೊಳ್ಳಪ್ಪ ಗ್ರಾಮೀಣ ಪ್ರದೇಶಕ್ಕೆ ಸೇವೆ ದೊರಕಬೇಕು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ ಕೊರತೆ ಇತ್ತು. ಇದರಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರ ಕಾಣಲಿದೆ ಎಂದರು. ಈ ಸಂದರ್ಭ ಹೃದ್ರೋಗ ತಜ್ಞ ಡಾ. ಆನಂದ್, ಮೂತ್ರಶಾಸ್ತç ತಜ್ಞ ಡಾ.ಮಂಜುನಾಥ್, ಫೆಸಿಲಿಟಿ ನಿರ್ದೇಶಕ ಪ್ರಶಾಂತ್ ದೇಸಾಯಿ, ಮಾರುಕಟ್ಟೆ ಮುಖ್ಯಸ್ಥ ಕೆ.ವಿ ಕಾಮತ್ ಸೇರಿದಂತೆ ಇನ್ನಿತರರು ಇದ್ದರು.